
ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನದಲ್ಲಿ 1% ಶೇಕಡಾವೂ ವೆಚ್ಚವಾಗುತ್ತಿಲ್ಲ; ಸರಕಾರಗಳ ಈ ವರ್ತನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿದೆ – ಆಯಾನ್ ಮಲ್ಪೆ ಆಕ್ರೋಶ
ಉಡುಪಿ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮತ್ತು ಶಿಷ್ಯ ವೇತನವನ್ಬು ತುರ್ತು ಬಿಡುಗಡೆಗೆ ಒತ್ತಾಯಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಉಡುಪಿ ಜಿಲ್ಲಾ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಐ.ಓ ಜಿಲ್ಲಾಧ್ಯಕ್ಷ ಆಯಾನ್ ಮಲ್ಪೆ, ” ಸತತ ಎರಡು ವರ್ಷದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ವಿದ್ಯಾರ್ಥಿ ಯುವಜನರನ್ನು ಸರಕಾರ ನಿರ್ಲಕ್ಷಿಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎರಡೂ ಕೂಡ ಎಡವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಅಭಿವೃದ್ಧಿಯಾಗಬೇಕಾದರೆ ಯುವ ಜನರ ಸಮಗ್ರ ಅಭಿವೃದ್ಧಿ ಅತೀ ಅಗತ್ಯ. ಯುವಕರು ಶ್ರೈಕ್ಷಣಿಕವಾಗಿ ಮುಂದುವರಿದು ಉನ್ನತ ಶಿಕ್ಷಣ ಪಡೆದಾಗ ಸಶಕ್ತ ಯುವ ಸಂಪನ್ಮೂಲ ಬೆಳೆದು ಬರಲು ಸಾಧ್ಯವಾಗುತ್ತಿದೆ. ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಆಮ್ಲಜನಕವಿದ್ದಂತೆ ಅದನ್ನು ಕಸಿದುಕೊಂಡರೆ ಹೇಗೆ? ಎಂದು ಪ್ರಶ್ನಿಸಿದರು.
ಸ್ಕಾಲರ್ಶಿಪ್ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮೀಸಲಿಟ್ಟ ಹಣವನ್ನು ನೀಡುತ್ತಿಲ್ಲ. ಬಡ ವಿದ್ಯಾರ್ಥಿಗಳಿಗೆ ಹಣ ದೊರಕಿಲ್ಲ. ಇದರಿಂದ ಶಿಕ್ಷಣ ವಂಚಿತರಾಗುವ ಸ್ಥಿತಿ ಇದೆ. ಆದರಿಂದ ಅನುದಾನ ತುರ್ತಾಗಿ ನೀಡಬೇಕು.
ಅಲ್ಪ ಸಂಖ್ಯಾತ ಇಲಾಖೆಗೆ ಮೀಸಲಿಟ್ಟ ಅನುದಾನದಲ್ಲಿ 1% ಬಜೆಟನ್ನು ವೆಚ್ಚ ಮಾಡುತ್ತಿಲ್ಲ. ಆ ಹಣವನ್ನು ಸರಕಾರ ಯಾಕೆ ಬಿಡುಗಡೆ ಮಾಡುತ್ತಿಲ್ಲ. ವಿದ್ಯರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದರೂ ಹಣ ಬರುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು, ಈ ರೀತಿಯ ವರ್ತನೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟದಲ್ಲಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನವನ್ನು ತುರ್ತಾಗಿ ಬಿಡುಗಡೆಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಮೀರ್ ತೀರ್ಥಹಳ್ಳಿ, ವಾಸೀಮ್ ಗುಜ್ಜರ್ ಬೆಟ್ಟು, ಸುಹೇಮ್ ಹೂಡೆ, ಅರ್ಬಾಝ್ ಕುಕ್ಕಿಕಟ್ಟೆ ಉಪಸ್ಥಿತರಿದ್ದರು.




