ಉಡುಪಿ ವೀಡಿಯೋ ಪ್ರಕರಣ ನಿರ್ವಹಿಸಿದ ಕಾಲೇಜು ಆಡಳಿತ ಮಂಡಳಿಯ ಪ್ರಬುದ್ಧತೆ ನಿಜಕ್ಕೂ ಶ್ಲಾಘನೀಯ – ಸಾಲಿಡಾರಿಟಿ ಉಡುಪಿ

ಉಡುಪಿ: ಉಡುಪಿಯ ಪ್ಯಾರ ಮೆಡಿಕಲ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಸಹಪಾಠಿಯೊಬ್ಬರ ವೀಡಿಯೋ ಮಾಡಿದ್ದಾರೆ ಎಂಬ ಆರೋಪ ಮೇಲೆ ವಿವಾದ ಸೃಷ್ಟಿಯಾಗಿದೆ. ಈ ಪ್ರಕರಣದಲ್ಲಿ ಕಾಲೇಜು ಆಡಳಿತ ಮಂಡಳಿಯು ತಮ್ಮ ಸಂಸ್ಥೆಯ ನಿಯಮಾನುಸಾರವಾಗಿ ವರ್ತಿಸಿ ಪ್ರಬುದ್ಧತೆ ಮತ್ತು ಬುದ್ದಿವಂತಿಕೆಯೊಂದಿಗೆ ನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆಯೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದೆ.

ಪೊಲೀಸ್ ಇಲಾಖೆಯು ಕೂಡ ಈ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ಕೇಳಿ ಬಂದ ಹಾಗೆ ವೀಡಿಯೋ ದಾಖಲೆಗಳು ಲಭ್ಯವಾಗಿಲ್ಲ. ಯಾವುದೇ ವೀಡಿಯೋ ವಿದ್ಯಾರ್ಥಿನಿಯರ ಮೊಬೈಲ್ ನಿಂದ ವರ್ಗಾವಣೆಗೊಂಡ ಕುರಿತು ಸಾಕ್ಷ್ಯ ದೊರಕಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಕೂಡ ಭೇಟಿ ನೀಡಿ ಈ ಪ್ರಕರಣವನ್ನು ಕೋಮು ಆಯಾಮದೊಂದಿಗೆ ನೋಡುವುದು ಬೇಡ. ತನಿಖೆ ಪೂರ್ಣಗೊಳ್ಳುವರೆಗೆ ಯಾವುದೇ ತೀರ್ಪು ನೀಡುವ ಅಗತ್ಯವಿಲ್ಲ ಎಂದು ಹೇಳಿರುವುದನ್ನು ಗಮನಿಸಬಹುದಾಗಿದೆ.

ಈಗಾಗಲೇ ಕೆಲವು ಹಿತಾಸಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಸಂಬಂಧ ಇಲ್ಲದ ವೀಡಿಯೊಗಳನ್ನು ಪಸರಿಸಿ ಸಮಾಜದಲ್ಲಿ ಧ್ರುವೀಕರಣ ರಾಜಕೀಯ ಮಾಡಲು ಹೊರಟಿದೆ. ಪೊಲೀಸರು ಅಂತಹ ಸುಳ್ಳು ಸುದ್ದಿ ವಕ್ತಾರರ ಮೇಲೂ ಪ್ರಕರಣ ದಾಖಲಿಸಿದೆ. ಇನ್ನು ಈ ಪ್ರಕರಣದಲ್ಲಿ ಹಲವಾರು ಮಂದಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದು ಅವರ ಮೇಲೂ ಪ್ರಕರಣ ದಾಖಲಿಸಬೇಕಾಗಿದೆ.

ಮುಖ್ಯವಾಗಿ ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯರು ತಪ್ಪು ಮಾಡಿರುವ ಕುರಿತು ಸಾಕ್ಷ್ಯ ದೊರಕಿದ್ದಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ. ಈ ಪ್ರಕರಣದಲ್ಲಿ ಯಾವುದೇ ಒತ್ತಾಯಕ್ಕೂ ಮಣಿಯದೆ ನ್ಯಾಯ ಸಮ್ಮತ, ನಿಷ್ಪಕ್ಷಪಾತದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದೆ ಇಡಬೇಕಾಗಿದೆ ಎಂದು ಸಾಲಿಡಾರಿಟಿ ಉಡುಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ‌.

Latest Indian news

Popular Stories