ಕುಂದಾಪುರ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಕುಂದಾಪುರ: ಕುಂದಾಪುರ ಹಾಸ್ಟೆಲ್’ನಲ್ಲಿ ವಾಸವಾಗಿದ್ದ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಕೋಣೆ ಎಂಬಲ್ಲಿ ಆ.31 ಗುರುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಪಡುಕೋಣೆ ನಿವಾಸಿ ಪ್ರಶಾಂತ್, ಸುನಂದಾ ದಂಪತಿ ಪುತ್ರಿ ಸಿಂಧು (16) ಎಂದು ಗುರುತಿಸಲಾಗಿದೆ

ಈ ವರ್ಷದ ಶೈಕ್ಷಣಿಕ ಆರಂಭ ವರ್ಷದಿಂದ (ಜೂನ್) ಸಿಂಧು ಕುಂದಾಪುರದ ವಡೇರಹೋಬಳಿಯಲ್ಲಿರುವ ಬಾಲಕಿಯರ ವಸತಿ ನಿಲಯದಲ್ಲಿದ್ದು ಸಮೀಪದ ಸರಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್‌.ಸಿ ಓದುತ್ತಿದ್ದರು. ಕಳೆದೆರಡು ದಿನಗಳ ಹಿಂದೆ ಅನಾರೋಗ್ಯವೆಂದು ತನ್ನ ಮನೆಗೆ ಹೋಗಿದ್ದ ಸಿಂಧುವನ್ನು ಬುಧವಾರ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ರಾತ್ರಿ ಮನೆಯಲ್ಲಿ ಚೆನ್ನಾಗಿಯೇ ಇದ್ದ ಆಕೆ ಪಕ್ಕದ ಅಜ್ಜಿಮನೆಯಲ್ಲಿ ಟಿವಿ ನೋಡಿ ವಾಪಾಸ್ಸಾಗಿದ್ದರು. ಗುರುವಾರ ಶಾಲೆಗೆ ಬರಬೇಕಿದ್ದರಿಂದ ತಂದೆ ಕುಂದಾಪುರಕ್ಕೆ ಬಿಡುವುದಾಗಿ ಹೇಳಿದ್ದು ಆದರೆ ಆಕೆ ತಾನು ಬಸ್ಸಿಗೆ ಹೋಗುವುದಾಗಿ ತಿಳಿಸಿದ್ದಳು. ಇದಾದ ಸ್ವಲ್ಪ ಸಮಯದ ನಂತರ ಮನೆಯವರು ಗಮನಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಸಿಂಧು ಮೃತದೇಹ ಪತ್ತೆಯಾಗಿದೆ. ಮೊದಲಿಗೆ ಮನೆಯವರು ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಕೂಲಂಕುಷ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ‌ ಕೆ.ಎಂ.ಸಿ ಆಸ್ಪತ್ರೆಗೆ ಪೊಲೀಸರು ಮೃತದೇಹ ರವಾನಿಸಿದ್ದಾರೆ.

ಮೃತಳ ತಂದೆ ಪ್ರಶಾಂತ್ ಕುಂದಾಪುರ ಪುರಸಭೆಯಲ್ಲಿ ಪೌರಕಾರ್ಮಿಕರಾಗಿದ್ದಾರೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪಿಎಸ್ಐ ಹರೀಶ್ ಆರ್. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Latest Indian news

Popular Stories