ಉಡುಪಿ: ಇಲ್ಲಿನ ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯಿತಿಯ ಹಾಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಧಾಕರ ಶೆಟ್ಟಿ ಅವರನ್ನು ಆರ್ಥಿಕ ಅವ್ಯವಹಾರ ಆರೋಪದಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ ನಿಯಮ ಸಂಖ್ಯೆ 8 (viii) ಪ್ರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ್ನಾಟಕ ಪಂಚಾಯತ್ ರಾಜ್ ಕಮಿಷನರೇಟ್‌ನ ಆಯುಕ್ತರು ಅಧಿಕಾರಿಯನ್ನು ಸಾರ್ವಜನಿಕ ಸೇವೆಯಿಂದ ತಕ್ಷಣ ವಜಾಗೊಳಿಸುವಂತೆ ಆದೇಶಿಸಿದ್ದಾರೆ.
ಸುಧಾಕರ ಶೆಟ್ಟಿ ಅವರು ಕಾರ್ಕಳದ ಕುಕ್ಕುಂದೂರು ಗ್ರಾ.ಪಂ.ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಈ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಟ್ಟು ಏಳು ಪ್ರಕರಣಗಳಲ್ಲಿ ಸುಧಾಕರ ಶೆಟ್ಟಿ ಸರ್ಕಾರದ ಬೊಕ್ಕಸದಿಂದ 34.42 ಲಕ್ಷ ರೂ. ದುರ್ಬಳಕೆ ಮಾಡಿರುವುದು ಸಾಬೀತಾಗಿದೆ.
ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅವರು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಸಲ್ಲಿಸಿದ ತನಿಖಾ ವರದಿಯ ಮೇರೆಗೆ ಸುಧಾಕರ ಶೆಟ್ಟಿಯವರ ವಿರುದ್ಧ ಮಾಡಲಾದ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ನಿಜವೆಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.