
ಉಡುಪಿ | ತಾಯಿ ಮತ್ತು ಮಕ್ಕಳ ರಕ್ಷಣೆ
ಉಡುಪಿ ಜ.22, ತಾಯಿ ತನ್ನ ಎರಡು ಪುಟ್ಟ ಕಂದಮ್ಮಗಳೊಂದಿಗೆ ರಾತ್ರಿ ಹೊತ್ತು ರಸ್ತೆ ಬದಿಯಲ್ಲಿ ಅಸಹಾಯಕಳಾಗಿದ್ದು, ಮುಲ್ಕಿ ಪೊಲೀಸರ ಸಹಾಯದಿಂದ ರಕ್ಷಿಸಿದ ವಿಶು ಶೆಟ್ಟಿಯವರು ಸಖಿ ಸೆಂಟರಿಗೆ ದಾಖಲಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕೌಟುಂಬಿಕ ಕಾರಣದಿಂದ ಮಹಿಳೆ ತನ್ನ ಎರಡು ಮಕ್ಕಳೊಂದಿಗೆ ಬೀದಿಗೆ ಬಂದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಮಕ್ಕಳು ಬೀದಿಗೆ ಬಿದ್ದಲ್ಲಿ ಅಪಾಯಕಾರಿ ಸನ್ನಿವೇಶಗಳು ನಡೆಯುವುದು ಖಂಡಿತ. ಈ ಬಗ್ಗೆ ಮಕ್ಕಳ ರಕ್ಷಣಾ ಘಟಕದವರು ಮಕ್ಕಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿಶು ಶೆಟ್ಟಿ ಆಗ್ರಹಿಸಿದ್ದಾರೆ. ಈ ಹಿಂದೆ ಕೂಡ ಈ ತಾಯಿ ಮಕ್ಕಳೊಂದಿಗೆ ಬೀದಿಗೆ ಬಿದ್ದ ಮಾಹಿತಿ ಇದೆ. ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಿ, ಮಹಿಳೆಯನ್ನು ಪತಿಗೆ ಹಸ್ತಾಂತರಿಸಲಾಗಿತ್ತು. ಪುನರಪಿ ಪರಿಸ್ಥಿತಿ ಈ ರೀತಿ ಆದಕಾರಣ ಮುಂದೆ ಮಕ್ಕಳಿಗೆ ಯಾವುದೇ ರೀತಿ ದುರಂತ ಅಸಹಾಯಕತೆ ತೋರಿ ಬಾರದ ರೀತಿಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದವರು ಹಾಗೂ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಜರುಗಿಸಿಕೊಂಡು ಮಕ್ಕಳನ್ನು ರಕ್ಷಿಸಬೇಕು. ಮಹಿಳೆ ತನ್ನ ಮಕ್ಕಳನ್ನು ರಕ್ಷಿಸುವಲ್ಲಿ ವಿಫಲವಾದಲ್ಲಿ ಮಕ್ಕಳನ್ನು ಸರಕಾರದ ಪಾಲನಾ ಕೇಂದ್ರಕ್ಕೆ ದಾಖಲಿಸುವ ಮುಖಾಂತರ ರಕ್ಷಿಸಬೇಕಾಗಿ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.




