ಉಡುಪಿ: ಮುಂಬರುವ ಚುನಾವಣೆ ಕರ್ನಾಟಕವಷ್ಟೆ ಅಲ್ಲ ಈ ದೇಶದ ದಿಕ್ಕು ದೆಸೆಯನ್ನು ನಿರ್ಧರಿಸುವ ಚುನಾವಣೆಯಾಗಿದೆ. ಆದ್ದರಿಂದ ಜಿಲ್ಲೆಯ ಮತದಾರರು ಉತ್ತಮ ರಾಜ್ಯ ಸರಕಾರ ಆಯ್ಕೆ ಮಾಡುವುದರ ಮೂಲಕ ದೇಶವನ್ನು ಭದ್ರಗೊಳಿಸಿ ಪ್ರಬುದ್ಧತೆಯನ್ನು ಮೆರೆಯುವ ಸಂದರ್ಭ ಇದಾಗಿದೆ. ರಾಜ್ಯದ ಆಡಳಿತಗಾರರು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ತಾರತಮ್ಯದ ಧೋರಣೆ, ಬೆಲೆ ಏರಿಕೆ ಮುಂತಾದ ಜನ ವಿರೋಧಿ ನೀತಿ ಅನುಸರಿಸಿ ರಾಜ್ಯಕ್ಕೆ ಹೊರೆಯಾಗಿ ಮಾರ್ಪಟಿದ್ದಾರೆ. ಆದ್ದರಿಂದ ಈ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಭ್ರಷ್ಟಾಚಾರದ ಕಳಂಕದಿಂದ ದೂರವಿರುವ, ಪ್ರಜಾತಾಂತ್ರಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ, ಸಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಮನೋಭಾವ ಉಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಮೂಲಕ ರಾಜ್ಯದಲ್ಲಿ ಉತ್ತಮ ಜನಪರ ಸರಕಾರ ಅಸ್ತಿತ್ವಕ್ಕೆ ಬರಲು ತಮ್ಮ ಕೊಡುಗೆಯನ್ನು ನೀಡಬೇಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಯಾಸೀನ್ ಮಲ್ಪೆಯವರು ಜಿಲ್ಲೆಯ ಮತದಾರರಲ್ಲಿ ಆಗ್ರಹಿಸಿದ್ದಾರೆ.
ಮೇ 10, ಬುಧವಾರದಂದು ಪ್ರತಿಯೊಬ್ಬ ಮತದಾರರು ತಮ್ಮ ಸಂವಿಧಾನಬದ್ಧ ಹಕ್ಕು ಚಲಾಯಿಸಿ ಈ ರಾಜ್ಯಕ್ಕೆ ಹೊಸ ಜಾತ್ಯತೀತ̧ ಪ್ರಗತಿಪರ, ಸರ್ವಧರ್ಮೀಯರ ಹಿತ ಬಯಸುವ ವಿಶಾಲ ಹೃದಯೀ ಸರಕಾರವನ್ನು ತರಬೇಕಾದ ದಿನ. ಆ ಪ್ರತಿಯೊಬ್ಬ ಮತದಾರನೂ ತಪ್ಪದೇ, ಯಾವುದೇ ಕುಂಟು ನೆಪ ಹೇಳದೆ, ಉತ್ಸಾಹದಿಂದ ಮತದಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಶಾಸಕತ್ವ ಎಂಬುವುದು ಯಾರದೋ ಅಹಂ ಮತ್ತು ದೊಡ್ಡಸ್ಥಿಕೆಯ ಪ್ರದರ್ಶನವಲ್ಲ ಅವರ ಸ್ವಯಂ ಅಧಿಕಾರವೂ ಅಲ್ಲ. ನಿಜವಾದ ಅಧಿಕಾರ ಜನತೆಯಾದ್ದಾಗಿದೆ. ಶಾಸಕರುಗಳು ಜನತೆಯ ಹಿತಾಸಕ್ತಿಯನ್ನು ಕಾಪಾಡುವ,ಜನತೆಯ ಅಧಿಕಾರವನ್ನು ಚಲಾಯಿಸುವ ನಮ್ಮಿಂದಲೇ ಆಯ್ಕೆಯಾದ ಜನರ ಪ್ರತಿನಿಧಿಯಾಗಿದ್ದಾರೆ. ಆದ್ದರಿಂದ ನಮ್ಮ ಪ್ರತಿನಿಧಿಯು ನಮ್ಮ ಅಧಿಕಾರವನ್ನು ಪ್ರಜಾತಾಂತ್ರಿಕ ಮೌಲ್ಯಗಳಿಗೆ ಅನುಗುಣವಾಗಿ ಅಧಿಕಾರವನ್ನು ಚಲಾಯಿಸಬೇಕಾಗಿದೆ. ಜಿಲ್ಲೆಯಲ್ಲಿ ಭ್ರಷ್ಟಾಚಾರ ರಹಿತ ಪ್ರಗತಿಯತ್ತ ಕೊಂಡೊಯ್ಯುದರೊಂದಿಗೆ ಉದ್ಯೋಗ ಸೃಷ್ಟಿ, ಹೊಸ ಉದ್ಯಮಗಳ ಸ್ಥಾಪನೆ, ಶಾಂತಿ ಸೌಹರ್ದತೆಗೆ ಒತ್ತು ನೀಡುವ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆಯ ಸ್ಥಾನವಾಗಿದೆ ಶಾಸಕತ್ವ. ಆದ್ದರಿಂದ ತಾವು ಮತ ನೀಡಿ ಆಯ್ಕೆ ಮಾಡುವ ಅಭ್ಯರ್ಥಿಗಳಲ್ಲಿ ಈ ಬೇಡಿಕೆಯನ್ನಿಟ್ಟು ಮತ ಚಲಾಯಿಸಬೇಕಾಗಿದೆ.
ಅಪಪ್ರಚಾರಗಳಿಗೆ, ವದಂತಿಗಳಿಗೆ, ಭಾವನಾತ್ಮಕ ಹಾಗು ಪ್ರಚೋದನಕಾರಿ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಿಗೆ, ಆಡಿಯೋ, ವಿಡಿಯೋಗಳಿಗೆ ಮತದಾರರು ಮರುಳಾಗಬಾರದು. ಒಂದೊಂದು ಮತವೂ ಇಂದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ಪ್ರಜ್ಞೆ ನಮಗಿರಬೇಕು. ಇಡೀ ನಾಡಿನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಹೆಚ್ಚು ಸಮರ್ಥ ಹಾಗು ಪ್ರಬಲ ಜಾತ್ಯತೀತ ಅಭ್ಯರ್ಥಿಗೆ ಮತ ನೀಡಿ ಚುನಾಯಿಸಬೇಕಾದ ಮಹತ್ವದ ದಿನ ಮೇ 10 ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.