ಉಡುಪಿ| ಸಿ.ಎನ್.ಜಿ ಇಂಧನದ ಕೊರತೆ; ಸಾಲುಗಟ್ಟಿ ಗಂಟೆಗಟ್ಟಲೇ ಕಾಯುವ ಆಟೋ ರಿಕ್ಷಾ ಚಾಲಕರು!

ಸಿ.ಎನ್.ಜಿ ಪರಿಸರ ಪೂರಕ, ಮೈಲೇಜ್ ಹೆಚ್ಚು ಎಂದು ಪ್ರಚಾರ ಮಾಡಿದ್ದರೂ ಅದರ ಪೂರೈಕೆಯ ಕೊರತೆಯ ಕಾರಣ ಸಿ.ಎನ್.ಜಿ ಆಧಾರಿತ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೇ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಉಡುಪಿಯಲ್ಲಿ ನಿರ್ಮಾಣವಾಗಿದೆ.

ಸಿಎನ್‌ಜಿ ಇಂಧನ ಆಧಾರಿತ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಹೆಚ್ಚುತ್ತಿಲ್ಲ. ಇರುವ ಬಂಕ್‌ಗಳಲ್ಲಿ ಬೇಡಿಕೆಯಷ್ಟು ಪೂರೈಕೆಯಾಗು ತ್ತಿಲ್ಲ. ಇದರಿಂದ ವಾಹನ ಸವಾರರು ಅದರಲ್ಲೂ ಮುಖ್ಯವಾಗಿ ರಿಕ್ಷಾ ಚಾಲಕರು ಗಂಟೆಗಟ್ಟಲೆ ಕಾಯಬೇಕಾಗಿದೆ.

ಉಡುಪಿಯಲ್ಲಿ 3 ಸಹಿತ ಕುಂದಾ ಪುರ ತಾಲೂಕಿನಲ್ಲಿ ಇರುವುದು ಕೇವಲ ಒಂದೇ ಒಂದು ಸಿಎನ್‌ಜಿ ಬಂಕ್‌. ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸಿಎನ್‌ಜಿ ಆಧಾರಿತ ವಾಹನಗಳಿವೆ. ಅದರಲ್ಲೂ ಕೋಟೇಶ್ವರದಲ್ಲಿರುವ ಸಿಎನ್‌ಜಿ ಬಂಕ್‌ನಲ್ಲಿ ನಿತ್ಯವೂ ಬೆಳಗ್ಗೆ 4 ಗಂಟೆಯಿಂದ ಬಂದು ಸಿಎನ್‌ಜಿ ಇಂಧನ ಹಾಕಿಸಲು ನೂರಾರು ರಿಕ್ಷಾಗಳು, ಇತರ ವಾಹನಗಳು ಕಾಯುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಇನ್ನು ಉಡುಪಿಯ ಭಾರತ್ ಪೆಟ್ರೋಲ್ ಬಂಕ್ ಬಳಿಯ ಸಿಎನ್ ಜಿ ಬಂಕ್ ನಲ್ಲೂ ಉದ್ದ ಆಟೋ ರಿಕ್ಷಾಗಳು ಸಾಲು ನಿಂತು ಇಂಧನಕ್ಕಾಗಿ ಕಾಯುತ್ತಿರುವುದನ್ನು ಗಮನಿಸಬಹುದಾಗಿದೆ.

ಕೆಲವೊಮ್ಮೆ 8-9 ಗಂಟೆಯವರೆಗೂ ಕಾಯಬೇಕಾದ ಸ್ಥಿತಿಯಿದೆ. ಕಾದರೂ ಎಲ್ಲರಿಗೂ ಸಿಗುತ್ತದೆ ಅನ್ನುವ ಗ್ಯಾರಂಟಿಯೂ ಇಲ್ಲ. ಉಡುಪಿ ಜಿಲ್ಲೆಯಲ್ಲಿ ಕೋಟೇಶ್ವರ, ಉಡುಪಿ, ಬ್ರಹ್ಮಾವರ ಸೇರಿದಂತೆ ಕೆಲವೇ ಕೆಲವು ಕಡೆಗಳಲ್ಲಿ ಸಿಎನ್‌ಜಿ ಇಂಧನದ ಬಂಕ್‌ಗಳಿವೆ. ಇನ್ನು ಕಾರ್ಕಳದಲ್ಲಿ ಈಗಷ್ಟೆ ಆರಂಭವಾಗುತ್ತಿದೆ. ಆದರೆ ಇರುವಂತಹ ಬಹುತೇಕ ಎಲ್ಲ ಸಿಎನ್‌ಜಿ ಬಂಕ್‌ಗಳಲ್ಲಿ ಬೇಡಿಕೆಯಷ್ಟು ಪೂರೈಕೆಯಾಗದೇ ಇರುವುದು ಸಮಸ್ಯೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಬಂಕ್‌ಗಳ ಸಂಖ್ಯೆ ಹೆಚ್ಚಾಗಬೇಕು ಹಾಗೂ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎನ್‌ಜಿ ಇಂಧನ ಪೂರೈಕೆ ಪ್ರಮಾಣವನ್ನು ಹೆಚ್ಚಿಸಿಬೇಕಿದೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ, ಹೆಚ್ಚುವರಿ ಬಂಕ್‌ಗಳ ಆರಂಭಕ್ಕೆ ಮುಂದಾಗಬೇಕು ಎನ್ನುವುದಾಗಿ ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರಿಕ್ಷಾ, ಕಾರು, ಬಸ್‌, ಟ್ರಕ್‌ ಸಹಿತ ಸಿಎನ್‌ಜಿ ಇಂಧನ ಆಧಾರಿತ ವಾಹನಗಳು ಅಂದಾಜು 5 ಸಾವಿರಕ್ಕೂ ಮಿಕ್ಕಿ ಇವೆ. ಈ ಪೈಕಿ ಬಹುಪಾಲು ರಿಕ್ಷಾಗಳೇ ಆಗಿವೆ. ಸಿಎನ್‌ಜಿ ಬಂಕ್‌ಗಳಿಗೆ ಪ್ರತಿ ದಿನ 2-3 ಲೋಡ್‌ಗಳು ಪೂರೈಕೆಯಾಗುತ್ತಿವೆಯಾದರೂ ಬಂದಷ್ಟೇ ಬೇಗ ಖಾಲಿಯಾಗುತ್ತಿದೆ. ಇದರಿಂದ ಬಂಕ್‌ಗಳಲ್ಲಿ ರಿಕ್ಷಾ ಚಾಲಕರು ಸಿಎನ್‌ಜಿ ಗ್ಯಾಸ್‌ ಲೋಡುಗಳು ಬರುವುದನ್ನೇ ಕಾಯುವಂತಾಗಿದೆ. ಬಂಕ್‌ಗಳ ಬಳಿ ರಿಕ್ಷಾಗಳ ಉದ್ದುದ್ದ ಸಾಲುಗಳು ಈಗ ಮಾಮೂಲಿಯಾಗಿವೆ. ಜೀವನಾಧಾರಕ್ಕಾಗಿ ರಿಕ್ಷಾವನ್ನೇ ನಂಬಿಕೊಂಡಿರುವ ಚಾಲಕರು ಬಹು ಸಮಯವನ್ನು ಬಂಕ್‌ಗಳಲ್ಲಿ ಕಳೆಯುವಂತಾಗಿದ್ದು, ಬಾಡಿಗೆ ಮಾಡುವುದಕ್ಕಿಂತ ಹೀಗೆ ಕಾಯುವುದರಲ್ಲಿ ಹೆಚ್ಚು ಕಾಲ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ಏರ್ಪಟ್ಟಿದೆ. ಸಿ.ಎನ್.ಜಿ ಬಳಕೆ ಪರಿಸರಕ್ಕೆ ಪೂರಕ, ಹೆಚ್ಚು ಮೈಲೇಜ್ ಎಂದು ಹೇಳಲಾಗುತ್ತದೆ. ಆದರೆ ಅದರ ಪೂರೈಕೆಯಲ್ಲಿನ ಅಸಡ್ಡೆ ಮಾತ್ರ ಸಿ.ಎನ್.ಜಿ ಆಧಾರಿತ ವಾಹನ ಚಾಲಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Latest Indian news

Popular Stories