ಕಾರವಾರ: ಅದಿರು ಕಳ್ಳತನ , ಒಳಸಂಚು ಹಾಗೂ ವಂಚನೆ ಪ್ರಕರಣದಲ್ಲಿ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿ , ಕಾರವಾರ ಶಾಸಕ ಸತೀಶ್ ಸೈಲ್ ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಅಪಾರ ಪ್ರಮಾಣದ ಹಣವನ್ನು ದಂಡ ವಿಧಿಸುತ್ತಿದ್ದಂತೆ, ಕಾರವಾರ ಕ್ಷೇತ್ರದಲ್ಲಿ ನೀರವ ಮೌನ ಆವರಿಸಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆ ಶಾಸಕರ ಅನರ್ಹತೆ ಭೀತಿ ಕಾಡತೊಡಗಿದೆ. ಕಾಂಗ್ರೆಸ್ ಮನೆಯಲ್ಲಿ ವಿಷಾಧದ ಛಾಯೆ ಆವರಿಸಿದೆ.
ಕಾರವಾರ ಅಂಕೋಲಾ ಕ್ಷೇತ್ರ ಶಾಸಕರಿಲ್ಲದೆ ಅನಾಥವಾಗಲಿದೆ ಎಂಬ ಭಾವನೆ ಕಾಡತೊಡಗಿದೆ. ಶಿರೂರು ಭೂ ಕುಸಿತ, ಕಾಳಿ ನದಿಯ ಹಳೆಯ ಸೇತುವೆ ದುರಂತಗಳ ನಡುವೆ ಇದೀಗ ಹದಿನಾಲ್ಕು ವರ್ಷಗಳ ಹಿಂದಿನ ಪ್ರಕರಣದ ತೀರ್ಪು ಕ್ಷೇತ್ರದ ಜನತೆಯಲ್ಲಿ ತಲ್ಲಣ ತಂದಿದೆ.
ಬಿಜೆಪಿ, ಜೆಡಿಎಸ್ ಮನೆಗಳಲ್ಲಿ ಸಂಭ್ರಮ ಕಂಡು ಬಂದಿದ್ದು, ಉಪ ಚುನಾವಣೆ ಆರು ತಿಂಗಳಲ್ಲಿ ಬರಬಹುದು ಎಂದು ಲೆಕ್ಕಾಚಾರ ಹಾಕುತ್ತಿವೆ. ಬಿಜೆಪಿ ಅಭ್ಯರ್ಥಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ 2300 ಮತಗಳ ಅಂತರದಿಂದ ಸೋತಿದ್ದು, ನಂತರ ದಿನಗಳಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಹಾಗೂ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿದ್ದು, ಚುನಾವಣೆಗೆ ತಯಾರಿಯನ್ನು ಸೋತದಿನದಿಂದ ನಡೆಸುತ್ತಿದ್ದರೆ, ಜೆಡಿಎಸ್ ನಲ್ಲಿರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಳೆದ ಹತ್ತು ವರ್ಷಗಳಿಂದ ಜನರಿಂದ ದೂರವಿದ್ದು , ಟೈಮ್ ಪಾಸ್ ರಾಜಕಾರಣ ಮಾಡುತ್ತಿದ್ದರು. ಈಚೆಗೆ ಶಾಸಕ ಸೈಲ್ ಅದಿರು ಪ್ರಕರಣದ ತೀರ್ಪು ಬರುವ ಸೂಚನೆ ಅರಿತಿದ್ದ ಮಾಜಿ ಸಚಿವ ಆನಂದ ಇದೀಗ ರಾಜಕೀಯಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದರು. ಇದೀಗ ಅವರ ಕಾರ್ಯಕರ್ತರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ.
ಶಾಸಕತ್ವ ಏನಾಗಲಿದೆ ?:
ಕಾರವಾರ ಶಾಸಕ ಸೈಲ್ ಶಾಸಕತ್ವ ಅನರ್ಹವಾದರೆ ಚುನಾವಣೆ ಆರು ತಿಂಗಳಲ್ಲಿ ಬರುವುದು ಗ್ಯಾರಂಟಿ. ಆಗ ಚನ್ನಪಟ್ಟಣದಲ್ಲಿ ಆದಂತೆ ಎನ್ ಡಿಎ ಅಭ್ಯರ್ಥಿ ಎಂಬ ಕಾರಣ ನೀಡಿ ಟಿಕೆಟ್ ಗದ್ದಲ ಆಗಲಿದೆ. ಆಗ ಯಾರು ಪಕ್ಷ ಬಿಡುತ್ತಾರೆ, ಯಾರು ಎಲ್ಲಿ ಸೇರುತ್ತಾರೆ ಎಂಬ ಕುತೂಹಲ ಇದ್ದೇ ಇದೆ. ಕಾರವಾರ ಕ್ಷೇತ್ರದಲ್ಲಿ ಹಿಂದೆ ಸಹ ವಸಂತ ಅಸ್ನೋಟಿಕರ್ ಶಾಸಕತ್ವ ಪ್ರಶ್ನಿಸಿ , ಮಾಜಿ ಸಚಿವ ರಾಣೆ ಕೋರ್ಟ್ ಮೆಟ್ಟಿಲು ಹೊತ್ತಿದ್ದರು. ಜಾತಿ ಹೆಸರಲ್ಲಿ ಮತ ಕೇಳಿದ್ದಾರೆಂದು , ಅವರ ಶಾಸಕತ್ವ ಅನರ್ಹ ಮಾಡಬೇಕೆಂದು ಮಾಜಿ ಸಚಿವ ಪ್ರಭಾಕರ ರಾಣೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ತೀರ್ಪು ಬರಲು ಮೂರು ವರ್ಷ ತಡವಾಯಿತು. ಶಾಸಕತ್ವ ಅರ್ಹತೆ ತೀರ್ಪು ಬರುವ ಮುನ್ನ ಶಾಸಕ ವಸಂತ ಅಸ್ನೋಟಿಕರ್ ಹತ್ಯೆಯಾಗಿತ್ತು. ಆಗ ಕಾರವಾರ ಕ್ಷೇತ್ರ ವರ್ಷಗಟ್ಟಕೆ ಶಾಸಕರಿಲ್ಲದೆ ಅನಾಥವಾಗಿತ್ತು.
ಬದಲಾದ ಸನ್ನಿವೇಶ:
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕರಿಗೆ ೭ ವರ್ಷ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಮುಂದೆ ರಾಜಕೀಯ ನಿರ್ಧಾರ ಏನಾಗಬಹುದು ಎಂಬ ಚರ್ಚೆ ನಡೆದಿದೆ. ಸೋಮವಾರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಕ್ಷೇತ್ರದಲ್ಲಿ ಹೊಸ ಮುಖಗಳು ಸಹ
ರಾಜಕೀಯವಾಗಿ ಬೆಳೆಯಲು ಸಜ್ಜಾಗುತ್ತಿರುವುದು ಕಾಣುತ್ತಿದೆ.
………