
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ : ಶಾಸಕ ಸೈಲ್ ಮೇಲಿನ ಅಪರಾಧ ಸಾಬೀತು ಎಂದು ಕೋರ್ಟ್ ತೀರ್ಪು
ಕಾರವಾರ: ಅಂಕೊಲಾದ ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಮೇಲಿನ ಅಪರಾಧ ಸಾಬೀತಾಗಿದೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಗಜಾನನ ಭಟ್ ಹೇಳಿದ್ದಾರೆ. ಶಿಕ್ಷೆಯ ಪ್ರಮಾಣ ನಾಳೆ ಅಥವಾ ನಾಡಿದ್ದು ಪ್ರಕಟವಾಗುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆ ಸೈಲ್ ಸೇರಿದಂತೆ ಕೋರ್ಟನಲ್ಲಿ ಹಾಜರಿದ್ದ ಆರೋಪಿಗಳನ್ನು ಸಿಬಿಐ ವಶಕ್ಕೆ ಪಡೆಯಿತು .
ಬೇಲೇಕೇರಿ ಅದಿರು ಕಳ್ಳತನ ಪ್ರಕರಣವನ್ನು ಕುರಿತು ಕರ್ನಾಟಕ ಲೋಕಾಯುಕ್ತ ವರದಿ ನೀಡಿತ್ತು. ವರದಿಯ ಅನ್ವಯ ಸಿಬಿಐ ತನಿಖೆ ಆರಂಭಿಸಿ, ಆರೋಪ ಪಟ್ಟಿ ಹೊರಿಸಿತ್ತು.
ಕಳೆದ 12 ವರ್ಷಗಳಿಂದ ಕೋರ್ಟನಲ್ಲಿ ಪ್ರಕರಣದ ವಾದ ವಿವಾದ ನಡೆಯುತ್ತಿತ್ತು. 2013 ರಲ್ಲಿ ಶಾಸಕರಾಗಿದ್ದಾಗಲೇ ಸಿಬಿಐ ಶಾಸಕ ಸೈಲ್ ರನ್ನು ಬಂಧಿಸಿತ್ತು. ಶಾಸಕ ಸೈಲ್ ಜಾಮೀನಿನ ಮೇಲೆ ಹೊರಗಿದ್ದರು. ಬೇಲೇಕೇರಿ ಬಂದರು ಅಧಿಕಾರಿ ಮಹೇಶ್ ಬಿಲಿಯೇ ಸಹ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯಿಂದ ಲೋಕಾಯುಕ್ತ ಸೀಜ್ ಮಾಡಿದ 6 ಲಕ್ಷ ಮೆಟ್ರಿಕ್ ಟನ್ ಅದಿರಲ್ಲಿ 113,12 ಮೆಟ್ರಿಕ್ ಟನ್ ಅದಿರು ಕಳ್ಳತನ ದಿಂದ ರಫ್ತಾಗಿತ್ತು ಎಂಬ ಆರೋಪ ಇತ್ತು . ಇದೀಗ ಈ ಆರೋಪವನ್ನು ಸಿಬಿಐ ಸಾಬೀತು ಮಾಡಿದೆ ಎನ್ನಲಾಗಿದೆ. ಜನಪ್ರತಿನಿಧಿಗಳ ಕೋರ್ಟ ಅಪರಾಧ ಸಾಬೀತಾಗಿದೆ ಎಂದು ಹೇಳುತ್ತಿದ್ದಂತೆ ಕ್ಷೇತ್ರದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
…..




