ತಮಿಳುನಾಡಿಗೆ ‘ಕಾವೇರಿ ನೀರು’ ಬಿಟ್ಟಿಲ್ಲ – ‘ಡಿಸಿಎಂ ಡಿ.ಕೆ ಶಿವಕುಮಾರ್’ ಸ್ಪಷ್ಟನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ. ಇದೆಲ್ಲ ಸುಳ್ಳು ಆರೋಪವಾಗಿದೆ. ನಾವು ಬಿಜೆಪಿಯವರಂತೆ ಮೂರ್ಖರಲ್ಲ. ನಮಗೂ ನೀರಿನ ವಿಚಾರದಲ್ಲಿ ಜವಾಬ್ದಾರಿ ಇದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಇಂದು ತಮಿಳುನಾಡಿಗೆ ನೀರು ಬಿಡಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ತಮಿಳುನಾಡಿಗೆ ನೀರು ಬಿಟ್ಟಿರುವ ಆರೋಪ ಸುಳ್ಳು.

ತಮಿಳುನಾಡಿಗೆ ಈ ಸಂದರ್ಭದಲ್ಲಿ ನೀರು ಬಿಡುವ ಪ್ರಶ್ನೆಯೇ ಇಲ್ಲ. ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬಿಡುವುದೂ ಇಲ್ಲ. ತಮಿಳುನಾಡಿಗೆ ಹೋಗುವ ಪ್ರತಿಯೊಂದು ನೀರಿನ ಲೆಕ್ಕ ದಾಖಲಾಗಿರುತ್ತದೆ. ನಾವು ಬಿಜೆಪಿಯವರಂತೆ ಮೂರ್ಖರಲ್ಲ. ನಾವು ನೀರಿನ ವಿಚಾರದಲ್ಲಿ ಜವಾಬ್ದಾರಿ ಹೊಂದಿದ್ದೇವೆ. ಕಾವೇರಿ ಭಾಗದ ರೈತರನ್ನು ನಾವು ಈ ಹಿಂದೆಯೂ ಕಾಪಾಡಿದಿದ್ದೇವೆ.

ಈಗಲೂ ಕಾಪಾಡುತ್ತಿದ್ದೇವೆ. ತಮಿಳುನಾಡು ನೀರು ಕೇಳುತ್ತಿಲ್ಲದಿರುವಾಗ ನಾವು ಯಾಕೆ ಅವರಿಗೆ ನೀರನ್ನು ಬಿಡೋಣ? ಕುಡಿಯುವ ನೀರಿನ ಪೂರೈಕೆ ನಮ್ಮ ಸರ್ಕಾರದ ಮೊದಲ ಆದ್ಯತೆ. ಶಿವ ಡ್ಯಾಂ ನಲ್ಲಿ ನೀರಿನ ಮಟ್ಟ 2 ಅಡಿ ಕಡಿಮೆ ಇದ್ದ ಕಾರಣ ಬೆಂಗಳೂರಿಗೆ ಪೂರೈಸಲು ನೀರನ್ನು ಪಂಪ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಕೊರತೆಯನ್ನು ತುಂಬಲು ಬಿಡಬ್ಲ್ಯೂಎಸ್‌ಎಸ್ ಬಿ ಮನವಿ ಮೇರೆಗೆ ಕೆಆರ್ ಎಸ್ ನಿಂದ ನೀರು ಹರಿಸಿದ್ದೇವೆಯೇ ಹೊರತು, ತಮಿಳುನಾಡಿಗೆ ನೀರು ಹರಿಸಿಲ್ಲ ಎಂದರು.

ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಮೇಕೆದಾಟು ಯೊಜನೆಯೊಂದೇ ಶಾಶ್ವತ ಪರಿಹಾರವಾಗಿದೆ. ಆದರೆ ಸದ್ಯದ ಮಟ್ಟಿಗೆ ನೀರಿನ ಅಭಾವ ನೀಗಿಸಲು ಹಾಲಿ ಇರುವ ಕೊಳವೆ ಬಾವಿಗಳನ್ನು ಮರು ಕೊರೆಯುವುದು, ಹೊಸ ಕೊಳವೆ ಬಾವಿ ಕೊರೆಯಲು ತೀರ್ಮಾನಿಸಿದ್ದೇವೆ.

ಕೈಗಾರಿಕೆ, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲರಿಗೂ ನೀರು ಪೂರೈಸುತ್ತೇವೆ. ಇದ್ಕಾಗಿ ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ಭಾಗದ ಹಳ್ಳಿಗಳ ರೈತರ ಜತೆಗೂ ಒಪ್ಪಂದ ಮಾಡಿಕೊಂಡು ಅವರ ಕೊಳವೆ ಬಾವಿ ಬಳಸಿಕೊಳ್ಳಲಾಗುವುದು. ಕೆಲವು ಬುದ್ಧಿವಂತರು ಸ್ನಾನಕ್ಕೂ ನೀರಿಲ್ಲ ಎಂದು ಟ್ವೀಟ್ ಮಾಡುತ್ತಾರೆ. ಈ ಮಧ್ಯೆ ವಾರ್ಡ್, ವಲಯ ಮಟ್ಟದಲ್ಲಿ ಕಾಲ್ ಸೆಂಟರ್ ಗಳನ್ನು ನಿರ್ಮಾಣ ಮಾಡಿದ್ದೇವೆ. ಬೆಂಗಳೂರಿನ ಇತಿಹಾಸದಲ್ಲೇ ಇಷ್ಟು ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಯಾವ ಸರ್ಕಾರವೂ ಮಾಡಿರಲಿಲ್ಲ ಎಂದು ತಿಳಿಸಿದರು.

Latest Indian news

Popular Stories