ಜೆಸ್ಕಾಂ ವ್ಯವಸ್ಥಾಪಕರ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಯಚೂರು:ವಿದ್ಯುತ್ ಪರಿವರ್ತಕ ಅಳವಡಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಕರಿಲಿಂಗಣ್ಣನವರ್ ಹಾಗೂ ಬಳ್ಳಾರಿ ವಲಯದ ಮುಖ್ಯ ಎಂಜಿನಿಯರ್ ಲಕ್ಷ್ಮಣ ಚವ್ಹಾಣ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಲೋಕಾಯುಕ್ತಕ್ಕೆ ಕಲಬುರಗಿಯ ಶರಣಪ್ಪ ರೆಡ್ಡಿ ದೂರು ನೀಡಿದ್ದಾರೆ.

ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಅನುಮತಿ ಪಡೆಯದೇ ನಿಯಮವನ್ನು ಉಲ್ಲಂಘಿಸಿದ ಜಿಲ್ಲೆಯ ಜೆಸ್ಕಾಂ 9 ಉಪ ವಿಭಾಗಗಳ ಸಹಾಯಕ ಕಾರ್ಯವಾಹಕ ಎಂಜಿನಿಯರ್, 3 ವಿಭಾಗಗಳ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ 3 ವಿಭಾಗೀಯ ಕಾಮಗಾರಿ ಘಟಕಗಳ ಸಹಾಯಕ ಎಂಜಿನಿಯರ್ ಸರ್ಕಾರಕ್ಕೆ ಪಾವತಿಸಬೇಕಿರುವ ಪರಿವೀಕ್ಷಣೆ ಶುಲ್ಕ ಪಾವತಿಸಿಲ್ಲ ಎಂದು ಆರೋಪಿಸಲಾಗಿತ್ತು.

2019–20ನೇ ಸಾಲಿನಿಂದ 2022–23ನೇ ಸಾಲಿನವರೆಗೆ ಒಟ್ಟು 3,424 ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಒಂದು ಪರಿವರ್ತಕಕ್ಕೆ ತಲಾ ₹3,100ರಂತೆ ಒಟ್ಟು ₹1.60 ಕೋಟಿ
(1,06,14,400) ಹಣ ಸರ್ಕಾರದ ಖಜಾನೆಗೆ ಸೇರದೇ ಎಂಜಿನಿಯರ್ ಗಳ ಪಾಲಾಗಿದೆ ಎಂದು ದೂರಿದ್ದಾರೆ.

₹1.60 ಕೋಟಿ ಹಣ ಲೂಟಿ ಮಾಡಿದರೂ ತಪ್ಪಿತಸ್ಥರ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್ ಹಾಗೂ ಲಕ್ಷ್ಮಣ ಚವ್ಹಾಣ ಅವರಿಗೆ ದೂರು ನೀಡಿದರೂ ತನಿಖೆ ನಡೆಸದೇ ಪರೋಕ್ಷವಾಗಿ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಇಬ್ಬರು ಅಧಿಕಾರಿಗಳನ್ನು ಕರ್ತವ್ಯಲೋ‍ಪ ಹಾಗೂ ದುರ್ನಡತೆಯ ಆಧಾರದ ಮೇಲೆ ಕ್ರಮ ಕೈಗೊಂಡು ಸರ್ಕಾರಕ್ಕೆ ನಷ್ಟವಾದ ಹಣ ವಸೂಲಿ ಮಾಡಿಕೊಳ್ಳಬೇಕು ಎಂದು ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

Latest Indian news

Popular Stories