ಕಾರವಾರ : ಕಾಳಿ ನದಿಗೆ ನಿರ್ಮಿಸಲಾಗಿರುವ ಹೊಸ ಸೇತುವೆಯ ಮೇಲೆ ಸಂಚಾರ ಆರಂಭವಾಗಿದ್ದು, ಹೊಸ ಸೇತುವೆಗೆ ಬೀದಿ ದೀಪಗಳನ್ನು ಅಳವಡಿಸದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಕಾಮಗಾರಿ ಕೈಗೊಂಡ ಐಆರ್‌ಬಿ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕವಾಗಿಯೇ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಎಲ್ಲರ ಆಕ್ಷೇಪಕ್ಕೆ ಕಾರಣವಾಗಿದೆ. ನಾಲ್ಕು ದಿನಗಳ ಹಿಂದಷ್ಟೇ 41 ವರ್ಷಗಳ ಹಳೆಯ ಸೇತುವೆ ಮೂರು ತುಂಡಾಗಿ ಕುಸಿದು ಬಿದ್ದಿದೆ. ಹಾಗಾಗಿ ಹಳೆಯ ಸೇತುವೆಯ ಪಕ್ಕದಲ್ಲೇ ಇದ್ದ
ಹೊಸ ಸೇತುವೆಯಲ್ಲಿ ದ್ವಿಮುಖ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಆದರೆ ಈ ಹೊಸ ಸೇತುವೆ ನಿರ್ಮಿಸಿದ ಐಆರ್‌ಬಿ ಈತನಕವೂ ಸ್ಟ್ರೀಟ್ ಲೈಟ್‌ಗಳನ್ನು ಅಳವಡಿಕೆ ಮಾಡಿಲ್ಲ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ಸೇತುವೆಯ ಮೇಲೆ ಕತ್ತಲು ಆವರಿಸುವುದರಿಂದ ಪಾದಚಾರಿಗಳಿಗೆ, ಸೈಕಲ್ ಸವಾರರಿಗೆ ಸಂಚಾರ ಕಷ್ಟದಾಯಕವಾಗಿದೆ.
ನದಿಗೆ ಅಡ್ಡಲಾಗಿರುವ ಸೇತುವೆ 0.670 ಕಿಮೀ ಉದ್ದವಿದೆ. ಸೇತುವೆಯ ಪ್ರಾರಂಭದ ತುದಿಯಲ್ಲಿ ಬೆಳಕಿಗೆ ಒಂದೇ
ಒಂದು ಲೈಟ್ ಅಳವಡಿಸಲಾಗಿದ್ದು, ಅದೂ ಸಹ ಸೇತುವೆ ಕಡೆ ಮುಖ ಮಾಡಿಲ್ಲ. ಇದನ್ನು ಹೊರತುಪಡಿಸಿ ಇಡೀ ಸೇತುವೆ ಮೇಲೆ ಎಲ್ಲಿಯೂ ಬೆಳಕಿನ ಕಿರಣಗಳು ಬೀಳುವುದಿಲ್ಲ.
ಕಾಳಿ ಸೇತುವೆ ಮೇಲೆ ಕಾರವಾರದ ಪಾದಚಾರಿಗಳು ಓಡಾಡುತ್ತಾರೆ. ವಾಹನ ಸಂಚಾರಕ್ಕೆ ಹಾಕಿದ ದೀಪಗಳು ಸಹ ಪದೇ ಪದೇ ಹಾಳಾಗುತ್ತದೆ. ಸೇತುವೆ ಮೇಲೆ ಬೆಳಕು ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ . ತಕ್ಷಣ ಗುತ್ತಿಗೆ ಕಂಪನಿ ಬೀದಿ ದೀಪ ಅಳವಡಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಸ್ಥಳೀಯರಾದ ದಿಲೀಪ್ ಅರ್ಗೇಕರ್, ರೋಷನ್ ಹರಿಕಂತ್ರ, ಸುನೀಲ್ ತಾಂಡೆಲ್, ಮೋಹನ ಉಳ್ವೇಕರ್ ಸೇರಿದಂತೆ ಇತರರು ಈ ಸಂಬಂಧ ಜಿಲ್ಲಾಡಳಿತಕ್ಕೆ ದೂರು ಕೂಡ ಸಲ್ಲಿಸಿದ್ದಾರೆ. ಹೊಸ ಸೇತುವೆ ಮೇಲೆ ಬೀದಿ ದೀಪಗಳನ್ನು ಶೀಘ್ರವಾಗಿ ಅಳವಡಿಸದೇ ಇದ್ದರೆ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ.
……..