Uttara Kannada

ಸಿಬ್ಬಂದಿ ಕೊರತೆಯಲ್ಲಿ ಅಬಕಾರಿ ಇಲಾಖೆ : 41ಅಬಕಾರಿ ಪೇದೆ ಹುದ್ದೆ ಸೇರಿದಂತೆ 75 ಹುದ್ದೆ ಖಾಲಿ

ಕಾರವಾರ : ಉತ್ತರ ಕನ್ನಡ ಜಿಲ್ಲಾ ಅಬಕಾರಿ ಇಲಾಖೆ ಸಿಬ್ಬಂದಿ ಕೊರತೆಯಲ್ಲಿ ಬಳಲುತ್ತಿದೆ. ಅದು ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಇರಬೇಕಾದ 11 ಜನ ಖಾಯಂ ಸಿಬ್ಬಂದಿಗಳಲ್ಲಿ ಬಹುತೇಕ ಹುದ್ದೆ ಖಾಲಿ ಇವೆ. ಪಕ್ಕದ ತಾಲೂಕು ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಚೆಕ್ ಪೋಸ್ಟ್ ನಿರ್ವಹಣೆ ಮಾಡಲಾಗುತ್ತಿದೆ. ಗೋವಾ ಗಡಿಪ್ರದೇಶದಲ್ಲಿ ಗೋವಾ ಮದ್ಯ ಅಕ್ರಮವಾಗಿ ಕರ್ನಾಟಕ ಪ್ರವೇಶ ಮಾಡುವುದರಿಂದ ಅಬಕಾರಿ ಇಲಾಖೆ ನಷ್ಟ ಹಾಗೂ ಕೆಟ್ಟ ಹೆಸರು ಹೊತ್ತು ನಿಂತಿದೆ. ಜಿಲ್ಲೆಯಲ್ಲಿ 41ಅಬಕಾರಿ ಪೇದೆ ಹುದ್ದೆ ಖಾಲಿ ಇವೆ. ಸರ್ಕಾರ ಇನ್ನಾದರೂ ಸಿಬ್ಬಂದಿ ಕೊರತೆ ನೀಗಿಸಲು ಮೊದಲ ಹೆಜ್ಜೆ ಇಡಬೇಕು ಎಂಬುದು ಸಾರ್ವಜನಿಕರ ಆಗ್ರಹ. ಅಬಕಾರಿ ಜಿಲ್ಲಾಧಿಕಾರಿ ಹುದ್ದೆ ಬಹುತೇಕ ಪಕ್ಕದ ಜಿಲ್ಲೆಯವರು ಆಗಾಗ ಬಂದು ನಿರ್ವಹಣೆ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ಅಬಕಾರಿ ಜಿಲ್ಲಾಧಿಕಾರಿ ಹುದ್ದೆಗೆ ಅಧಿಕಾರಿ ಬಾರದೆ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ.ಕೊಡಗಿನ ಅಬಕಾರಿ ಜಿಲ್ಲಾಧಿಕಾರಿ ,ಇಲ್ಲವೆ ಉಡುಪಿ ಅಬಕಾರಿ ಜಿಲ್ಲಾಧಿಕಾರಿ ಉತ್ತರ ಕನ್ನಡ ಜಿಲ್ಲೆಯ ಹೊಣೆ ಹೊತ್ತಿದ್ದರು. ಈಗ ತಿಂಗಳ ಹಿಂದಿನ ಗದ್ದಲ ಮತ್ತು ಗೊಂದಲದ ಮಧ್ಯೆ ಬೆಳಗಾವಿ ಜಿಲ್ಲೆಯ ಅಬಕಾರಿ ಜಿಲ್ಲಾಧಿಕಾರಿಗೆ ಪ್ರಭಾರ ಹೊಣೆ ನೀಡಲಾಗಿದೆ.
ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಒಟ್ಟು 75 ಹುದ್ದೆ ಖಾಲಿ ಇವೆ. ಇದರಿಂದ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗಿದೆ. ಡಿಂಗಿ ವಿಚಕ್ಷಣ ದಳ ರದ್ದಾಗಿದೆ.‌ ಅಕ್ರಮ ಮದ್ಯ ಸಾಗಾಟದ ಮೇಲೆ ನಿಗಾ ಇಡುವ ಮದ್ಯ ವಿರೋಧಿ ಸ್ವ್ಕಾಡ್ ಸಹ ಸಿಬ್ಬಂದಿ ಕೊರತೆಯಿಂದ ರದ್ದಾಗಿದೆ. ಮಾಜಾಳಿ ಚೆಕ್ ಪೋಸ್ಟ್ ನಿರ್ವಹಣೆಯಲ್ಲಿ ಎಡವಿದ ಇನ್ಸ್ಪೆಕ್ಟರ್ ಹಳದನಕರ್, ಒಬ್ಬ ಕಾನ್ಸಸ್ಟೆಬಲ್ ಮೇಲೆ ಇಲಾಖೆ ತನಿಖೆ ನಡೆಯುತ್ತಿದೆ. ಅನಮೂಡ ಚೆಕ್ ಪೋಸ್ಟ್ ಇನ್ಸ್ಪೆಕ್ಟರ್ ಮಂಜುನಾಥ , ಒಬ್ಬ ಕಾನ್ಸಸ್ಟೆಬಲ್ ಮೇಲೆ ಸಹ ಇಲಾಖಾ ತನಿಖೆ ನಡೆಯುತ್ತಿದೆ .

ಖಾಲಿ ಹುದ್ದೆಗಳು:
ಅಬಕಾರಿ ಉಪ ಆಯುಕ್ತರ ಒಂದು ಹುದ್ದೆ, ಮೂರು ಜನ ಅಬಕಾರಿ ನಿರೀಕ್ಷಕರು, ಒಂಬತ್ತು ಜನ ಉಪ ನಿರೀಕ್ಷಕರು,‌ ಒಂಬತ್ತು ಜನ‌ ದ್ವಿತೀಯ ದರ್ಜೆ ಸಹಾಯಕರ ಹುದ್ದೆ , 41 ಅಬಕಾರಿ ಪೇದೆ ಹುದ್ದೆ, 7 ಜನ ವಾಹನ ಚಾಲಕರ ಹುದ್ದೆ , 2 ಮುಖ್ಯ ಪೇದೆ ಹುದ್ದೆ ಖಾಲಿ ಇವೆ.ಎಫ್ ಡಿಸಿ, ಶೀಘ್ರ ಲಿಪಿಕಾರ ಹಾಗೂ ಟೈಪಿಸ್ಟ ಹುದ್ದೆಗಳು ತಲಾ ಒಂದರಂತೆ ಖಾಲಿ ಇವೆ. ಕಚೇರಿ ಒಳಗಿನ ಕೆಲಸಕ್ಕೆ ಹೊರ ಗುತ್ತಿಗೆ ಸಹ ಪಡೆಯಲಾಗಿಲ್ಲ.
ಗೃಹರಕ್ಷಕ ದಳದ ಸಿಬ್ಬಂದಿಯನ್ನು ಸಹ ಕರ್ತವ್ಯಕ್ಕಾಗಿ ಪಡೆದಿಲ್ಲ. ಸಮುದ್ರ ಮಾರ್ಗ, ಅರಣ್ಯ ಮಾರ್ಗವಾಗಿ ನಡೆವ ಅಕ್ರಮ ಮದ್ಯ ಸಾಗಾಟ ನಿಯಂತ್ರಣ ಅಸಾಧ್ಯವಾಗಿದೆ ಎಂಬುದು ಇಲಾಖೆಯ ಅಧಿಕಾರಿಗಳ ಬೇಗುದಿ. ಪ್ರಾಮಾಣಿಕ ಅಧಿಕಾರಿಗಳನ್ನು ಯಾವುದೋ ವಿವಾದದಲ್ಲಿ ಸಿಕ್ಕಿಸಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ದೂರು ಸಹ ಕೇಳಿಬರತೊಡಗಿದೆ.

ಕಾಯಕಲ್ಪ ಅಗತ್ಯ:
ಉತ್ತರ ಕನ್ನಡದ ಅಬಕಾರಿ ಸಿಬ್ಬಂದಿ ಕೊರತೆ , ಚೆಕ್ ಪೋಸ್ಟ್ ಸೂಕ್ಷ್ಮತೆಗಳು ಮುಖ್ಯಮಂತ್ರಿ ಗಮನಕ್ಕೆ ಸಹ ಹೋಗಿವೆ. ಶೀಘ್ರ ಸಿಬ್ಬಂದಿ ಕೊರತೆ ನೀಗಿದರೆ ಇಲಾಖೆಯನ್ನು ಹಳಿಗೆ ತರಬಹುದು. ಅಲ್ಲದೆ ಅಬಕಾರಿ ಇಲಾಖೆಯಿಂದ ಸಿಬ್ಬಂದಿ ಕೊರತೆ‌ ನೀಗಲು ಸಹ ಪ್ರಸ್ತಾತ ಸಹ ಹೋಗಿದೆ ಎನ್ನುತ್ತಾರೆ‌ ಪ್ರಭಾರ ಅಬಕಾರಿ ಜಿಲ್ಲಾಧಿಕಾರಿ ಜಗದೀಶ್ ಕುಲಕರ್ಣಿ ಹೇಳಿದರು. ಅಬಕಾರಿ ದಾಳಿಯಲ್ಲಿ ಸಿಕ್ಕ ವಾಹನಗಳನ್ನು ಸಹ ಮೂಲ‌ ಮಾಲಕರು ಬಿಡಿಸಿಕೊಳ್ಳಲು ಮುಂದೆ ಬರಲ್ಲ. ಅಬಕಾರಿ ಕೋರ್ಟ್ ನಲ್ಲಿ ಇತ್ಯರ್ಥ ವಾಗುವ ವೇಳೆಗೆ ವಾಹನ ಸ್ಕ್ರಾಪ್ ಆಗಿರುತ್ತವೆ ಎಂದರು.‌ ಅಕ್ರಮ ಮದ್ಯ ಸಾಗಾಟದ 250 ವಾಹನ ವಶ ಪ್ರಕರಣ ಗಳಲ್ಲಿ, 189 ವಾಹನಗಳನ್ನು ಬ್ಯಾಂಕ್ ಗ್ಯಾರಂಟಿ ನೀಡಿ ಸಂಬಂಧಿತರು ಬಿಡಿಸಿಕೊಂಡಿದ್ದಾರೆ. ಉಳಿದಂತೆ ಪ್ರಕರಣಗಳ ವ್ಯಾಜ್ಯ ನಡೆಯುತ್ತಿದೆ ಎಂದರು.

ಅಬಕಾರಿ ಇಲಾಖೆಯ ಚೆಕ್ ಪೋಸ್ಟ್ ಬಲಗೊಳಿಸಲು ಪ್ರಯತ್ನ ನಡೆದಿದೆ. ಮಾಜಾಳಿ ಚೆಕ್ ಪೋಸ್ಟ್ ನಲ್ಲಿ
ಪೊಲೀಸ್ ಇಲಾಖೆಯ ಜೊತೆಗೆ ಉಂಟಾದ ಮನಸ್ತಾಪ ಸರಿಪಡಿಸಲಾಗಿದೆ. ಸಿಬ್ಬಂದಿ ಕೊರತೆಯ ಬಗ್ಗೆ ತಿಳಿಸಿ, ಹೊಸ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಪ್ರಭಾರ ಅಬಕಾರಿ ಜಿಲ್ಲಾಧಿಕಾರಿ ಹೇಳಿದರು.
….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button