ಕಾರವಾರ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಕೋರಿ ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದ ಹೋರಾಟವು ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಹೋರಾಟವನ್ನು ಮತ್ತೆ ಪ್ರಾರಂಭಿಸಲು ಮೇ . 23 ರಂದು ಜೋಯಿಡಾ ತಾಲೂಕಿನ ಉಳವಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ, ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕಾರವಾರದಲ್ಲಿ ಮಂಗಳವಾರ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಮೀಸಲಾತಿಯ ಹೋರಾಟ ಅರ್ಧಕ್ಕೆ ನಿಂತಿದೆ. ಇದೀಗ ಮತ್ತೆ ಆರಂಭಿಸಿ ಸರಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ ಎಂದರು. ಕಳೆದ 2023 ರಲ್ಲಿ ಸರಕಾರವು ವಿಶೇಷವಾಗಿ 2 ಡಿ ಮೀಸಲಾತಿ ನೀಡಿದ್ದರೂ, ಅನುಷ್ಠಾವಾಗುವ ಸಮಯದಲ್ಲಿ ನೀತಿ ಸಂಹಿತೆ ಎದುರಾಗಿತ್ತು. ಬಳಿಕ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಿದ್ದು, ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದಿದ್ದ ಮುಖ್ಯಂಮತ್ರಿ ಸಿದ್ದರಾಮಯ್ಯ ಕೂಡ ನಿರ್ಲಕ್ಷ್ಯ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆಯೂ ಹೋರಾಟಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಉಳವಿಯಿಂದ ಮತ್ತೆ ಹೋರಾಟ ಪ್ರಾರಂಭಿಸುತ್ತೇವೆ ಎಂದರು. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಂತಿಯುತ ಹೋರಾಟ ಮಾಡಿದ್ದೆವು. ಬಳಿಕ ಹೋರಾಟ ತೀವ್ರ ಗೊಳಿಸಿದ್ದಕ್ಕೆ ಅನೇಕ ರಾಜಕೀಯ ಬದಲಾವಣೆಗಳು ಆಗಿದ್ದವು. ಈಗಲೂ ಶಾಂತಿಯುತವಾಗಿಯೇ ಹೋರಾಟ ಮಾಡಲಿದ್ದೇವೆ. ಸರಕಾರ ಮಣಿಯದಿದ್ದರೆ ಹೋರಾಟವನ್ನು ಉಗ್ರ ರೂಪಕ್ಕೆ ಕೊಂಡೊಯ್ಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಳವಿಯಲ್ಲಿ ಮೆ 23 ರಂದು ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ. ಸದ್ಯ ಪದಾಧಿಕಾರಿಗಳು ಹಾಗೂ ಭಕ್ತರು ಮಾತ್ರ ಹೋರಾಟ ಮಾಡಲಿದ್ದು ನೀತಿ ಸಂಹಿತೆ ಮುಗಿದ ಬಳಿಕ ರಾಜಕೀಯ ನಾಯಕರು ಭಾಗವಹಿಸುತ್ತಾರೆ ಎಂದರು.
……