
ಆಸ್ತಿಗಾಗಿ ಭಟ್ಕಳದ ಓಣಿಬಾಗಿಲು ಗ್ರಾಮದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣ: ವಿನಯ್ ಭಟಗೆ ಮರಣ ದಂಡನೆ, ಶ್ರೀಧರ ಭಟ್ ಗೆ ಜೀವಾವಧಿ ಶಿಕ್ಷೆ ಪ್ರಕಟ
ಕಾರವಾರ: ಭಟ್ಕಳದ ಓಣಿ ಬಾಗಿಲು ಗ್ರಾಮದಲ್ಲಿ 2023 ರಲ್ಲಿ ಕೃಷಿಕ ಶಂಭು ಭಟ್, ಪತ್ನಿ ಮಾದೇವಿ, ಮಗ ರಾಘವೇಂದ್ರ ,ಸೊಸೆ ಕುಸುಮಾ ಅವರನ್ನು ಕತ್ತಿ ಯಿಂದ ಕೊಚ್ಚಿ ಕೊಲೆಗೈದಿದ್ದ ಅಪರಾಧಿ ವಿನಯ ಶ್ರೀಧರ ಭಟ್ ಗೆ ಮರಣದಂಡನೆ ಹಾಗೂ ಆತನ ತಂದೆ ಶ್ರೀಧರ ಜೆ.ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿತು . ನ್ಯಾಯಾಧೀಶ ವಿಜಯ್ ಕುಮಾರ್ ತೀರ್ಪು ಪ್ರಕಟಿಸಿ, ಶಂಭು ವಿ. ಭಟ್ ಹಾಗೂ ಅವರ ಕುಟುಂಬದ ಮೂವರನ್ನು ಕೊಲೆಗೈದ ವಿನಯ ಭಟ್ ಗೆ ಹಗ್ಗದಿಂದ ಕುತ್ತಿಗೆಗೆ ಸಾಯುವತನಕ ನೇಣು ಹಾಕಿ ಎಂದು ಮರಣ ದಂಡನೆಯ ತೀರ್ಪುನಲ್ಲಿ ಬರೆದಿದ್ದಾರೆ. ಶಂಭು ಭಟ್ ಅವರ ಪತ್ನಿ ಮಾದೇವಿಯನ್ನು ಕತ್ತಿಯಿಂದ ಕೊಲೆಗೈದ ಶ್ರೀಧರ ಭಟ್ ಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂ.ದಂಡ ತುಂಬುವಂತೆ ತೀರ್ಪು ಬರೆದಿದ್ದಾರೆ. ಶ್ರೀಧರ ಭಟ್ ಮಗಳು ವಿದ್ಯಾ ಭಟ್ ವಿರುದ್ಧ ಸಾಕ್ಷಾಧಾರ ಕೊರತೆ ಕಾರಣ ಆಕೆಯನ್ನು ಆರೋಪ ದಿಂದ ಖುಲಾಸೆ ಮಾಡಲಾಗಿದೆ.
ನಾಲ್ವರ ಹತ್ಯೆಗೆ ಕಾರಣ:
ಕೊಲೆಯಾದ ಶಂಭು ಭಟ್ ಅವರ ಹಿರಿಯ ಮಗ ಕಿಡ್ನಿ ವೈಫಲ್ಯ ದಿಂದ 2022 ರಲ್ಲಿ ಮರಣ ಹೊಂದಿದ. ಈತನ ಪತ್ನಿ ವಿದ್ಯಾ , ಪತಿಗೆ ಬರುವ ಆಸ್ತಿ ಪಾಲು ಮಾಡಿ ಕೊಡುವಂತೆ ಶಂಭು ಭಟ್ ನ ಹಿರಿಯ ಮಗನ ಪತ್ನಿ ವಿದ್ಯಾ ಭಟ್ ತಕರಾರು ತೆಗೆದಿರುತ್ತಾಳೆ. ಈ ಸಂಬಂಧ ಊರಲ್ಲಿ ಪಂಚಾಯತಿ ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿರುತ್ತದೆ . ಕೊನೆಗೆ ಫೆಬ್ರವರಿ 2023 ರಲ್ಲಿ ಓಣಿ ಬಾಗಿಲು ಗ್ರಾಮದ ಶಂಭು ಭಟ್ ನ ತೋಟಕ್ಕೆ ಬಂದ ಹಲ್ಯಾಣಿ ಗ್ರಾಮದ ಶ್ರೀಧರ ಭಟ್ ಹಾಗೂ ಅವರ ಮಗ ವಿನಯ ಭಟ್ ವಿಳ್ಯೆದೆಲೆ ಕೊಯ್ಯಲು ಪ್ರಾರಂಭಿಸುತ್ತಾರೆ. ಇದನ್ನು ಕಂಡ ಶಂಭು ಭಟ್ ತಕರಾರು ಮಾಡಿದಾಗ, ಜಗಳ ನಡೆದು ಶಂಭು ಭಟ್ ,ಮಗ ರಾಘವೇಂದ್ರ ಯಾನೆ ರಾಜು ಭಟ್ , ಪತ್ನಿ ಮಾದೇವಿ, ಕಿರಿಯ ಸೊಸೆ ಕುಸುಮಾ ಭಟ್ ಅವರನ್ನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಕೊಲೆಯನ್ನು ಪ್ರತ್ಯಕ್ಷವಾಗಿ ಕಂಡಿದ್ದ ಸಾಕ್ಷಿ ತಿಮ್ಮಪ್ಪ ಗೊಂಡ, ಧನಪಾಲ್ ಜೈನ್ ಸೇರಿದಂತೆ ಹಲವರು ನಡೆದ ಘಟನೆ ಬಗ್ಗೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಫಾರನ್ಸಿಕ್ ಲ್ಯಾಬ್ ವರದಿ , ವೈದ್ಯರ ಹೇಳಿಕೆಗಳು ಕೊಲೆಯನ್ನು ಪುಷ್ಠಿಕರಿಸಿದ್ದವು. ಸರ್ಕಾರಿ ವಕೀಲೆ ತನುಜಾ ಹೊಸಪಟ್ಟಣ ಕೊಲೆಯಾದ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಿದ್ದರು. ಭಟ್ಕಳ ಗ್ರಾಮೀಣ ಪೊಲೀಸರು ಸಾಕ್ಷ್ಯ ಸಂಗ್ರಹಿಸಿ, ಕಪಾಡಿ ಕೋರ್ಟನಲ್ಲಿ ಹಾಜರು ಪಡಿಸಿದ್ದರು.
….




