ಹೊನ್ನಾವರ: ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕಾಸರಕೋಡಿನಲ್ಲಿ ಬಂದರು ನಿರ್ಮಾಣ ಕಾಮಗಾರಿಯ ಸರ್ವೇ ಕಾರ್ಯಕ್ಕೆ ಅಡ್ಡಿಪಡಿಸಿದ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೆಲವು ವರ್ಷಗಳಿಂದ ಈ ಯೋಜನೆ ಜಾರಿಗೆ ಪರ-ವಿರೋಧ ನಡೆಯುತ್ತಲೇ ಇದ್ದು, ವಾಣಿಜ್ಯ ಬಂದರು ಪ್ರದೇಶ ವ್ಯಾಪ್ತಿಯಲ್ಲಿ ಮೀನುಗಾರರು ಮತ್ತು ಅ ಧಿಕಾರಿಗಳ ಜಟಾಪಟಿ ಬುಧವಾರ ಪುನಃ ಆರಂಭವಾಗಿದೆ. ಬೆಳಗ್ಗೆ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ 300ಕ್ಕೂ ಅಧಿ ಕ ಜನ ಜಮಾಯಿಸಿದ್ದಾರೆ. ಅಧಿಕಾರಿಗಳು ಪೊಲೀಸರೊಂದಿಗೆ ಸರ್ವೇಗೆ ಮುಂದಾದ ಹಿನ್ನೆಲೆಯಲ್ಲಿ ಮೀನುಗಾರರು ತೀವ್ರ ಪ್ರತಿಭಟನೆ ನಡೆಸಿದರು.
ಸಹಾಯುಕ್ತ ಆಯುಕ್ತೆ ನಯನಾ ಅವರು ಮೀನು ಗಾರರ ಜತೆ ಮಾತುಕತೆ ನಡೆಸಿದರೂ ಪ್ರತಿಭಟನ ಕಾರರು ಪಟ್ಟು ಬಿಡಲಿಲ್ಲ. ಮಧ್ಯಾಹ್ನದವರೆಗೂ ಸರ್ವೇಗೆ ಅವಕಾಶ ನೀಡಲಿಲ್ಲ. ಬಳಿಕ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಮೂಲಕ ಸ್ಥಳಕ್ಕೆ ಆಗಮಿಸಿ ಹೈಟೈಡ್ ಲೈನ್ ಸರ್ವೇಗೆ ಮುಂದಾಗುತ್ತಿದ್ದಂತೆ ಪುನಃ ವಿರೋಧ ವ್ಯಕ್ತವಾಯಿತು.