ಕಾರವಾರ : ಕಾಂಗ್ರೆಸ್ ಸರಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಅವರು ಶುಕ್ರವಾರ ಕಾರವಾರದ ಮೆಡಿಕಲ್ ಕಾಲೇಜು ಸಭಾಗಂಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಡ ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗೆ ಒಂದರಂತೆ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಯೋಚನೆ ಇದೆ.ಬಡವರಿಗಾಗಿ ಆಸ್ಪತ್ರೆಗಳ ಸ್ಥಾಪನೆ ನಮ್ಮ ಆದ್ಯತೆ ಎಂದರು.
ಕ್ಯಾನ್ಸರ್, ಹೃದಯ ರೋಗಕ್ಕೆ ಬಡ ಜನರು ಚಿಕಿತ್ಸೆ ಪಡೆಯುವುದು ದುಬಾರಿ. ಈ ನಿಟ್ಟಿನಲ್ಲಿ ಬಡಜನರಿಗೆ ಉಚಿತ ಸೇವೆ ಕಲ್ಪಿಸಲು, ಉತ್ತಮ ಆರೋಗ್ಯ ಸೇವೆ ನೀಡಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ನಾನೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ, ಆಸ್ಪತ್ರೆ ನಿರ್ಮಾಣದ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇನೆ ಎಂದರು. ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಅಗತ್ಯತೆ ಇದೆ. ಈ ಬಗ್ಗೆ ಅರ್ಜಿ ಸಹ ಕರೆಸಲಾಗಿದೆ. ಆದರೆ ಇಬ್ಬರು ಮಾತ್ರ ಆಗಮಿಸಿದ್ದಾರೆ . ಅತ್ಯಾಧುನಿಕ ಉಳಿವ ವ್ಯವಸ್ಥೆ ಕೊರತೆ ಇರುವುದರಿಂದ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ವಿಕಿರಣದ ವರದಿ ತರಿಸಿಕೊಳ್ಳುವೆ:
ಕೈಗಾ ಅನುಸ್ಥಾವರ ವಿಕಿರಣ , ವೆಸ್ಟಕೋಸ್ಟ ಪೇಪರ್ ಕಾರ್ಖನೆಯ ಪರಿಸರ ಮಾಲಿನ್ಯ
ಕಾರಣಕ್ಕೆ ಶ್ವಾಸಕೋಶದ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ, ಕ್ಯಾನ್ಸರ್ ಆಸ್ಪತ್ರೆಯ ಕೇವಲ ಕಾರವಾರದಲ್ಲಿ ಮಾತ್ರ ನಿರ್ಮಾಣವಾಗುತ್ತಿಲ್ಲ. ಮೈಸೂರು, ತುಮಕೂರು, ಮಂಡ್ಯ, ರಾಯಚೂರು ಜಿಲ್ಲೆಗಳಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಕೈಗಾ ಪರಮಾಣು ಸ್ಥಾವರ ಇರುವುದರಿಂರ ಸಹಜವಾಗಿಯೇ ಜನರಲ್ಲಿ ಆತಂಕ ಸೃಷ್ಟಿಯಾಗಿರಬಹುದು. ಆದರೆ ಎಲ್ಲ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿದೆ. ಕೈಗಾದಿಂದ ಕ್ಯಾನ್ಸರ್ ಹೆಚ್ಚುತ್ತಿದ್ದೆಯೇ ಎನ್ನುವುದರ ಬಗ್ಗೆಯೇ ಟಾಟಾ ಇನ್ಸ್ಟಿಟ್ಯೂಟ್ ಮಾಡಿದ ಸರ್ವೆ ವರದಿ ತರಿಸಿಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲೆಲ್ಲಿ ಆಸ್ಪತ್ರೆ ನಿರ್ಮಾಣ ಸರ್ಕಾರದಿಂದ ಸಾಧ್ಯವಾಗಿಲ್ಲವೂ ಅಲ್ಲಿ, ಪಿಪಿಪಿ ಮಾದರಿಯಲ್ಲಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಆದರೆ ಬಡವರಿಗೆ ಸರಕಾರದ ದರದಲ್ಲಿ ಚಿಕಿತ್ಸೆ ನೀಡಬೇಕು ಎಂಬುದು ಶರತ್ತು ಹಾಕುತ್ತೇವೆ ಎಂದರು.
ಮುಕ್ತಾಯ ಹಂತದಲ್ಲಿದೆ :
ಕಾರವಾರದಲ್ಲಿ 450 ಹಾಸಿಗೆಯ ಆಸ್ಪತ್ರೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಆಸ್ಪತ್ರೆ ಆರಂಭಿಸಲು ಅಗತ್ಯವಾಗಿ ಬೇಕಾದ ಹೆಚ್ಚುವರಿ ವೆಚ್ಚ, ಪೀಠೋಪಕರಣ, ಯಂತ್ರೋಪಕರಣಗಳ ಅಗತ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲೇ ಆಸ್ಪತ್ರೆ ಆರಂಭಿಸುವ ಉದ್ದೇಶವಿದೆ. ವೈದ್ಯರ ಕೊರತೆ ಇದೆ. ಮುಖ್ಯವಾಗಿ, ಕಾರವಾರ, ಚಾಮರಾಜನಗರ, ಕೊಡಗು ಜಿಲ್ಲೆಯ ಆಸ್ಪತ್ರೆಯಲ್ಲಿರುವ ವೈದ್ಯರ ವರ್ಗಾವಣೆಯನ್ನು ಮಾಡುತ್ತಿಲ್ಲ. ವೈದ್ಯರ ಕೊರತೆ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್, ಮೆಡಿಕಲ್ ಕಾಲೇಜು ನಿರ್ದೇಶಕಿ ಡಾ.ಪೂರ್ಣಿಮಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.