ಉ.ಕ | ಕದ್ರಾ -ಕೊಡಸಳ್ಳಿ ಮಧ್ಯೆ ಸಂಪರ್ಕ ಕಡಿತ: ಜಿ ಎಸ್ ಐ ತಜ್ಞರ ಸಲಹೆ ಪಡೆಯಲು ಮುಂದಾದ ಜಿಲ್ಲಾಡಳಿತ

ಕಾರವಾರ : ಅತ್ಯಂತ ಸೂಕ್ಷ್ಮ ಪ್ರದೇಶವಾದ ಕದ್ರಾ ಅಣೆಕಟ್ಟು ಮತ್ತು ಕೊಡಸಳ್ಳಿ ಅಣೆಕಟ್ಟು ಪಕ್ಕವೇ ಹಾದು ಹೋಗುವ ಸಂಪರ್ಕ ರಸ್ತೆಯಲ್ಲಿ ಆದ ಭೂ ಕುಸಿತ ಸುತ್ತಲ ಗ್ರಾಮಗಳ ಜನರನ್ನು ಆತಂಕಕ್ಕೆ ತಳ್ಳಿದೆ . ಕದ್ರಾ ಅಣೆಕಟ್ಟು ಮತ್ತು ಕೊಡಸಳ್ಳಿ ಅಣೆಕಟ್ಟು ಸಂಪರ್ಕಿಸುವ ಏಕೈಕ ಭೂ ಮಾರ್ಗ ಈಗ ಧರೆ ಕುಸಿತದಿಂದ ಮುಚ್ಚಿದೆ. ಬಾರೀ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿದೆ. ಬಿದ್ದ ಮಣ್ಣು, ಮರ ತೆಗೆದರೆ ಮತ್ತೆ ಭೂ ಕುಸಿತದ ಭೀತಿ ಇದ್ದು, ಈ ಸಂಬಂಧ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ತಜ್ಞರ ಸಲಹೆ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ. ಈ ಕಾರಣ ಕದ್ರಾ ಕೊಡಸಳ್ಳಿ ರಸ್ತೆ ಮಧ್ಯೆ ವಾಹನ ಸಂಚಾರಕ್ಕೆ ನಿಷೇಧ ಹೇರಿದೆ. ಕದ್ರಾ ಕೊಡಸಳ್ಳಿ ಮಧ್ಯೆ ಬಾಳೆಮನೆ, ಹರುಟುಗಾ , ಸೇರಿದಂತೆ ನಾಲ್ಕಾರು ಹಳ್ಳಿಗಳ ಜನ ಈಗ ಕದ್ರಾಕ್ಕೆ ಬರಲು ದೋಣಿ ಸಂಚಾರವನ್ನು ಅವಲಂಬಿಸುವಂತಾಗಿದೆ. ಕೊಡಸಳ್ಳಿ ಅಣೆಕಟ್ಟು ನಿರ್ವಹಣಾ ಸಿಬ್ಬಂದಿ ಸಹ ದೋಣಿಯಲ್ಲಿ ಕದ್ರಾ ಹಿನ್ನಿರು ಪ್ರದೇಶದಿಂದ ಕೊಡಸಳ್ಳಿಗೆ ತೆರಳುತ್ತಿದ್ದಾರೆ. ಕೊಡಸಳ್ಳಿ ಮೇಲ್ಭಾಗದ ಗುಡ್ಡದದಲ್ಲಿ 2019ರಲ್ಲಿ ಬಿರುಕು ಕಾಣಿಸಿಕೊಂಡಿತ್ತು . ಈ ಸ್ಥಳಕ್ಕೆ ಭೂ ವಿಜ್ಞಾನಿಗಳು ಭೇಟಿ ನೀಡಿದ್ದರು .ಮತ್ತು ಅಲ್ಲಿ ಯಾವುದೇ ಗಣಿ ಚಟುವಟಿಕೆ ಮಾಡದಂತೆ ಕಾವಲು ಇರಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ನಂತರ ಅಣೆಕಟ್ಟು ವ್ಯಾಪ್ತಿಯಲ್ಲಿ ನಾಲ್ಕಾರು ಕಿಲೋಮೀಟರ್ ದೂರದಲ್ಲಿ ಭೂ ಕುಸಿತ, ರಸ್ತೆ ಪಕ್ಕದ ಧರೆ ಕುಸಿದಿದೆ. ಇದು ಅಣೆಕಟ್ಟು ಗಳಿಗೆ ಏನು ತೊಂದರೆ ತರುವುದಿಲ್ಲ ಎಂದು ಕೆಪಿಸಿ ಎಂಜಿನಿಯರ್ ಶ್ರೀಧರ ಕೋರಿ ತಿಳಿಸಿದ್ದಾರೆ. ಕದ್ರಾ ಗ್ರಾಮಪಂಚಾಯತ್ ಸದಸ್ಯ ಶಾಮ ನಾಯ್ಕ ಭೂ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನರ ಆತಂಕ ದೂರ ಮಾಡುವ ಬಗ್ಗೆ ಜಿಲ್ಲಾಡಳಿತ, ಜಿಎಸ್ ಐ ತಜ್ಞರು ಕ್ರಮಕೈಗೊಳ್ಳಬೇಕೆಂದು ಹೇಳಿದ್ದಾರೆ.
ಇತ್ತ ಜಿಲ್ಲಾಡಳಿತ ತಕ್ಷಣ ಧರೆ ಕುಸಿತದ ಮಣ್ಣು ತೆರವು ಮಾಡದೆ, ಮಳೆ ಕಡಿಮೆಯಾಗುವುದನ್ನು ಕಾಯುತ್ತಿದೆ. ಕದ್ರಾ ಕೊಡಸಳ್ಳಿ ಭಾಗದಲ್ಲಿ ಅತೀ ಮಳೆಯೇ ಧರೆ ಕುಸಿತಕ್ಕೆ ಕಾರಣ ಎಂದು ಭೂವಿಜ್ಞಾನಿಗಳ ಅಭಿಮತ.
ಜಿಲ್ಲೆಯಲ್ಲಿ ಕಳೆದ ವರ್ಷ ಧರೆ ,ಗುಡ್ಡ ಕುಸಿತದ 439 ಸ್ಪಾಟ್ ಗಳನ್ನು ಗುರುತಿಸಲಾಗಿದೆ .ರಾಷ್ಟ್ರೀಯ ಹೆದ್ದಾರಿ ಹಾಗೂ ಜಿಲ್ಲೆಯ ಘಟ್ಟದ ಸೂಕ್ಷ್ಮ ಪ್ರದೇಶ ,ಕ್ವಾರಿ ಸುತ್ತಲ ಪ್ರದೇಶ, ರಾಜ್ಯ ಹೆದ್ದಾರಿ ಸೇರಿದಂತೆ ಹಲವು ಸೂಕ್ಷ್ಮ ಕುಸಿತದ ಪ್ರದೇಶವನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ತಜ್ಞರು ಗುರುತಿಸಿದ್ದಾರೆ. ಅಂಥ ಕುಸಿತದ ಸ್ಥಳದ ಬಗ್ಗೆ ನಿಗಾ ಸಹ ಇಡಲಾಗಿದೆ. ಹೆದ್ದಾರಿ ಕುಸಿತದ ಸ್ಥಳದಲ್ಲಿ ವಾಲ್ ಕಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಸೂಚಿಸಿದೆ .
ಕದ್ರಾ – ಕೊಡಸಳ್ಳಿ ಮಧ್ಯೆ ರಸ್ತೆಯ ಮೇಲೆ ಧರೆ ಕುಸಿತದಿಂದ ಅಣೆಕಟ್ಟು ಸುರಕ್ಷತೆಗೆ ಯಾವುದೇ ತೊಂದರೆ ಇಲ್ಲ .ಅಣೆಕಟ್ಟುಗಳಿಂದ ಧರೆ ಕುಸಿತ ಪ್ರದೇಶ ದೂರದಲ್ಲಿದೆ. ಭಯ ಪಡುವಂತಹದ್ದೇನಿಲ್ಲ ಎಂದು ಕರ್ನಾಟಕ ಪವರ್ ಕಾರ್ಪೂರೇಶನ್ ಕದ್ರಾದ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ ಕೋರಿ ಹೇಳಿದ್ದಾರೆ.
…