ಕಾರವಾರ: ಕಾರವಾರ ಜಿಲ್ಲೆಯ ನದಿ ,ಕಡಲತೀರದ ಪ್ರವಾಸಿತಾಣಗಳಲ್ಲಿ ಹಾಗೂ ಮುರುಡೇಶ್ವರ, ಗೋಕರ್ಣದಲ್ಲಿ ಸಂಕ್ರಾಂತಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು.
ಕಾರವಾರ, ಗೋಕರ್ಣ, ಯಾಣ , ಶಿರಸಿ ಮಾರಿಕಾಂಬೆ ದೇವಾಲಯಗಳಲ್ಲಿ ಮಕರಸಂಕ್ರಾಂತಿ ನಿಮಿತ್ತ ವಿಶೇಷ ಪೂಜೆಗಳು ನಡೆದವು . ಮಕರ ಸಂಕ್ರಾಂತಿಯಂದು ಕಡಲತೀರಕ್ಕೆ ಬಂದ ಪ್ರವಾಸಿಗರು ಸಮುದ್ರ ಸ್ನಾನಕ್ಕೆ ಮೊರೆ ಹೋದರು. ಗೋಕರ್ಣ ,ಮುರುಡೇಶ್ವರ ಗಳಲ್ಲಿ ಜನರು ಸಮುದ್ರ ಸ್ನಾನ ಮಾಡಿ ಶಿವಲಿಂಗದ ದರ್ಶನ ಮಾಡಿದರು.ಗೋವಾ ಆಂದ್ರ,ಮಹಾರಾಷ್ಟ್ರ ದಿಂದ ಶಿವಭಕ್ತರು ಆಗಮಿಸಿದ್ದರು.
ಯಾಣದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಸಂಕ್ರಾಂತಿ ಆಚರಿಸಿದರು . ದಾಂಡೇಲಿ ಸಮೀಪದ ಆಕಳ ಗವಿಯಲ್ಲಿ ಪ್ರವಾಸಿಗರು ಸಂಕ್ರಾಂತಿ ಹಬ್ಬ ಆಚರಿಸಿದರು. ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಹೆಚ್ಚಿತ್ತು. ಸಹಸ್ರಲಿಂಗಕ್ಕೆ ಸಹ ಭಕ್ತರು ಭೇಟಿ ನೀಡಿ ನದಿ ಸ್ನಾನ ಮಾಡಿದರು. ನದಿಯಲ್ಲಿನ ಲಿಂಗಗಳಿಗೆ ಪೂಜೆ ಅರ್ಪಿಸಿದರು. ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಸಂಕ್ರಾಂತಿ ನಿಮಿತ್ತ ಹೆಣ್ಣುಮಕ್ಕಳು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದರು . ಜಿಲ್ಲೆಯಲ್ಲಿ ಎಲ್ಲೆಡೆ ಸಂಕ್ರಾಂತಿ ಹಬ್ಬ ಎಳ್ಳು ಬೆಲ್ಲ ಹಂಚಿದ್ದು ಕಂಡು ಬಂತು.ಮಕ್ಕಳು ಹೊಸ ಬಟ್ಟೆ ತೊಟ್ಟು , ಮನೆ ಮನೆಗೆ ತೆರಳಿ ಸಂಕ್ರಾಂತಿ ಸಿಹಿ ಹಂಚಿದ್ದು ಕಂಡು ಬಂತು.
ಬಹುತೇಕ ಸಾರ್ವಜನಿಕರು ತಮ್ಮ ಬಂಧು ಮಿತ್ರರಿಗೆ ಸಂಕ್ರಾಂತಿ ಶುಭಾಶಯಗಳ ವಿನಿಮಯ ಮಾಡಿಕೊಂಡು ವರ್ಷದ ಮೊದಲ ಸಂಭ್ರಮ ಆಚರಿಸಿದರು.
…..