ಉತ್ತರ ಕನ್ನಡ ಇಂದಿನ ಪ್ರಮುಖ ಸುದ್ದಿಗಳು

ಜೂ.21 ಕಾರವಾರದಲ್ಲಿ ಜಿಲ್ಲಾ ಮಟ್ಟದ ಯೋಗ ದಿನಾಚರಣೆಗೆ ಸಿದ್ಧತೆ : ಡಾ.ಲಲಿತಾ ಶೆಟ್ಟಿ

ಕಾರವಾರ: ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಜಿಲ್ಲಾಮಟ್ಟದ ಕಾರ್ಯಕ್ರಮವು ಜೂನ್ 21 ರಂದು ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಲಿತಾ ಶೆಟ್ಟಿ ಹೇಳಿದರು.

ಕಾರವಾರದ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಮಹಿಳಾ ಸಬಲೀಕರಣಕ್ಕೆ ಯೋಗ ’ ಘೋಷವಾಕ್ಯದಡಿ ಈ ಬಾರಿಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಜೂ.21 ರ ಬೆಳಿಗ್ಗೆ 6 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ. ನೂರಾರು ಜನರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಲಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು‌.

ಯೋಗ ದಿನಾಚರಣೆಯ ಮುನ್ನಾ ದಿನವಾದ ಜೂನ್ 20 ರಂದು ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಯೋಗ ಜಾಥಾ ನಡೆಯಲಿದೆ. ಸಾರ್ವಜನಿಕರಿಗೆ ಯೋಗದ ಕುರಿತು ಜಾಗೃತಿ ಮೂಡಿಡಸುವ ಕೆಲಸ ಮಾಡಲಾಗುತ್ತದೆ. ಯೋಗ ತರಬೇತಿಯ ಜತೆಗೆ ಸಾರ್ವಜನಿಕರಿಗೆ ಆಯುಷ್ ಜೀವನ ಪದ್ಧತಿ ವಿವರಿಸಿ, ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧಗಳನ್ನೂ ವಿತರಿಸಲಾಗುತ್ತಿದೆ ಎಂದರು.

ಯೋಗ ದಿನಾಚರಣೆಯ ಭಾಗವಾಗಿ ಜೂನ್ 10 ರಿಂದ ಜಿಲ್ಲೆಯಾದ್ಯಂತ ಯೋಗೋತ್ಸವ ಆರಂಭಗೊಂಡಿದೆ. ಯೋಗ ತರಬೇತುದಾರರು, ಆಯುಷ್ ಅಧಿಕಾರಿಗಳು ಯೋಗ ತರಬೇತಿ ನೀಡುತ್ತಿದ್ದಾರೆ. ಕ್ರೈಸ್ ಅಧೀನದ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ತರಬೇತಿ ನೀಡುವ ಕೆಲಸ ನಡೆಯುತ್ತಿದೆ. ಜತೆಗೆ ನಗರ ಮತ್ತು ಗ್ರಾಮೀಣ ಭಾಗದ ಹಲವೆಡೆ ಮಹಿಳೆಯರಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು‌. ಆಯುರ್ವೇದ ಆಸ್ಪತ್ರೆಯ ಸಿಬ್ಬಂದಿಗಳಾದ ಡಾ.ಸಂಗಮೇಶ ಪರಂಡಿ, ಡಾ.ಮಲ್ಲಿಕಾರ್ಜುನ್, ಸಂಜೀವಕುಮಾರ ನಾಯ್ಕ ಉಪಸ್ಥಿತರಿದ್ದರು.

ಎನ್‌ಡಬ್ಲೂಕೆಆರ್‌ಟಿಸಿ ಡಿಸಿ,ಕುಮಟಾ‌,ದಾಂಡೇಲಿ ಡಿಪೋ ಮ್ಯಾನೇಜರ್‌ಗಳಿಗೆ ರೂ.3ಸಾವಿರ ದಂಡ

ಕಾರವಾರ : ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡದೇ ನಿರ್ವಾಹಕರು ಸೇವಾ ನ್ಯೂನತೆ ಎಸಗಿರುವ ಪ್ರಕರಣದಲ್ಲಿ ನಿರ್ವಾಹಕರಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿ, ಕಿರಿಯ ನೌಕರರ ಬಗ್ಗೆ ನಿರ್ಲಕ್ಷ್ಯ ತೋರಿದ ಎನ್‌ಡಬ್ಲೂಕೆಆರ್‌ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್‌ಗಳಿಗೆ 3ಸಾವಿರ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ದಾಂಡೇಲಿಯ ದಾಮೋದರ ಎಂಬುವರು ತಮಗೆ ಹಿರಿಯ ನಾಗರಿಕರ ರಿಯಾಯಿತಿ ಟಿಕೇಟ್ ನೀಡಲಿಲ್ಲವೆಂದು ನಿರ್ವಾಹಕರು ಸೇರಿದಂತೆ ಎನ್‌ಡಬ್ಲ್ಯೂಕೆಆರ್‌ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್ ವಿರುದ್ಧ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು. ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ.ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ಆದೇಶ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮುಂಚೆ ವಿಚಾರಣೆ ನಡೆಸಿದ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಮತ್ತು ತಮ್ಮ ಕೆಳಗಿನ ನೌಕರರ ಬಗೆಗೆ ನಿರ್ಲಕ್ಷ್ಯ ತೋರಿರುವುದನ್ನು ಗಮನಿಸಿದ ಆಯೋಗವು , ಪ್ರಕರಣದ ನಿರ್ವಾಹಕರಿಗೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಅವರನ್ನು ಪ್ರಕರಣದಿಂದ ವಜಾಗೊಳಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್‌ಗಳ ವಿರುದ್ಧ ಆದೇಶಿಸಿ, ದೂರುದಾರರಿಗೆ ಸಿಗಬೇಕಾದ ಹಿರಿಯ ನಾಗರಿಕರ ರಿಯಾಯಿತಿಯ ಹತ್ತುಪಟ್ಟು ಮೊತ್ತ ಪಾವತಿಸುವುದರೊಂದಿಗೆ ಪ್ರಕರಣದ ಖರ್ಚು-ವೆಚ್ಚವಾಗಿ ರೂ.3ಸಾವಿರಗಳನ್ನು ಈ ಎಲ್ಲಾ ಅಧಿಕಾರಿಗಳು ಜಂಟಿಯಾಗಿ ಮತ್ತು ವೈಯಕ್ತಿಕವಾಗಿ ಪಾವತಿಸುವಂತೆ ಆಯೋಗ ತನ್ನ ಆದೇಶದಲ್ಲಿ ಹೇಳಿದೆ.

ದೂರುದಾರರ ಪರ ನ್ಯಾಯವಾದಿ ದರ್ಶನ ವಿ. ಗೌಡ, ಎನ್‌ಡಬ್ಲೂಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್‌ಗಳ ಪರವಾಗಿ ವಕೀಲ ವಿ.ಎ.ತೋಡುರಕರ, ನಿರ್ವಾಹಕರ ಪರವಾಗಿ ವಕೀಲ ಪಿ.ಜಿ.ಪೋಳೆಕರ್ ವಕಾಲತ್ತು ನಡೆಸಿದ್ದರು.

ದಾಂಡೇಲಿಯಲ್ಲಿ ಮನೆಗಳ್ಳತನ

ಕಾರವಾರ : ದಾಂಡೇಲಿ ನಗರದ ಟೌನಶಿಪ್’ನ ಮನೆಯೊಂದರಲ್ಲಿ ಕಳ್ಳತನವಾಗಿರುವ ಘಟನೆ ಭಾನುವಾರ ನಸುಕಿನ ವೇಳೆಯಲ್ಲಿ ನಡೆದಿದೆ.

ಟೌನಶಿಪ್ ನಲ್ಲಿರುವ ಲತಾ ಉದಯ್ ಶೆಟ್ಟಿ ಅವರ ಮನೆಯ ಹತ್ತಿರದ ಮನೆಯೊಂದರಲ್ಲಿ ಲಲಿತಾ ಮೇಧಾ ಮತ್ತು ಅವರ ಪುತ್ರ ನಾಗರಾಜ್ ಮೇಧಾ ಅವರು ಬಾಡಿಗೆದಾರರಾಗಿ ವಾಸ್ತವ್ಯವಿದ್ದು, ಅವರು ಶನಿವಾರ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಈ ಇಬ್ಬರೂ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಭಾನುವಾರ ನಸುಕಿನ ವೇಳೆಯಲ್ಲಿ ಮನೆಯ ಹಿಂಭಾಗದ ಬಾಗಿಲಿನ ಚಿಲಕವನ್ನು ಮುರಿದು ಒಳ ನುಗ್ಗಿದ್ದಾರೆ. ಮನೆಯ ಒಳಗಡೆಯಿದ್ದ ಕಪಾಟಿನ ಬಾಗಿಲು ಮುರಿದು ಕಪಾಟಿನಲ್ಲಿದ್ದ ಚಿನ್ನದ ಒಡವೆ ಹಾಗೂ ನಗದನ್ನು ದೋಚಿದ್ದಾರೆ.

ಭಾನುವಾರ ಬೆಳಿಗ್ಗೆ ಎಂದಿನಂತೆ ಮನೆಗೆ ಮನೆ ಕೆಲಸದವರು ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲು ತೆರೆದಿದ್ದ ಹಿನ್ನೆಲೆಯಲ್ಲಿ ಅವರು ನಾಗರಾಜ ಮೇಧಾ ಅವರಿಗೆ ಮೊಬೈಲ್ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ನಾಗರಾಜ ಮೇಧಾ ಅವರು ಕೂಡಲೇ ಅವರ ಸಹೋದರರಾದ ಅದೇ ವಾರ್ಡಿನಲ್ಲಿ ವಾಸವಿರುವ ಅನಿಲ್ ಕೃಷ್ಣ ಮೇಧಾ ಅವರಿಗೆ ವಿಷಯವನ್ನು ತಿಳಿಸಿ ಮನೆಗೆ ಹೋಗಿ ನೋಡುವಂತೆ ಹೇಳಿದ್ದಾರೆ. ಅನಿಲ್ ಕೃಷ್ಣ ಮೇಧಾ ಅವರು ತಕ್ಷಣವೇ ಬಂದು ನೋಡಿದಾಗ ಕಳ್ಳತನವಾಗಿರುವುದು ಕಂಡುಬಂದಿದೆ. ಕೂಡಲೇ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.

ಸ್ಥಳಕ್ಕೆ ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್ಐ ಗಳಾದ ಐ.ಆರ್ ಗಡ್ಡೆಕರ್, ರವೀಂದ್ರ ಬಿರದಾರ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಎಷ್ಟು ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿದೆ ಎನ್ನುವ ಸ್ಪಷ್ಟ ಮಾಹಿತಿ ಲಲಿತಾ ಅವರು ಬಂದ ನಂತರವಷ್ಟೇ ತಿಳಿದು ಬರಬೇಕಾಗಿದೆ.

……….

…..

Latest Indian news

Popular Stories