ವಿಜಯಪುರ : ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಮೋದಿ ಮೋದಿ ಎಂದು ಕೂಗುವ ಯುವಕರ ಕೆನ್ನೆಗೆ ಬಾರಿಸಿ ಎಂಬ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ತಂಗಡಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಶಿವರಾಜ್ ತಂಗಡಗಿ ಅವರ ಈ ಹೇಳಿಕೆ ದೇಶದ ಕೋಟ್ಯಂತರ ಯುವಕರ ಭಾವನೆಗೆ ಧಕ್ಕೆ ತಂದಿದೆ ನರೇಂದ್ರ ಮೋದಿಜಿ ಅವರ ಬೆಂಬಲಿತ ವಿವಿಧ ಸಂಘಟನೆಗಳು ಅವರ ಅಭಿಮಾನಿಗಳಿಗೆ ತೀವ್ರ ನೋವು ಉಂಟು ಮಾಡಿದೆ, ಇಡೀ ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದೆ ಜಗಮೆಚ್ಚಿದ ಜನನಾಯಕ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ.
ಶಿವರಾಜ್ ತಂಗಡಿ ಅವರಿಗೆ ತಾಕತ್ತಿದ್ದರೆ ದೇಶದ ಒಬ್ಬನೇ ಒಬ್ಬ ಮೋದಿ ಅಭಿಮಾನಿಗೆ ಮುಟ್ಟಿ ನೋಡಲಿ ಅವರ ಪರಿಸ್ಥಿತಿ ಏನಾಗುವುದು ಎಂಬುದು ದೇಶದ ಯುವಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಶಿವರಾಜ ತಂಗಡಗಿ ಅವರ ಮೇಲೇ ಸೂಕ್ತ ಕ್ರಮ ಕೈಗೊಳ್ಳುಲು ಸರ್ಕಾರ ಹಿಂಜರದರೆ ಇನ್ನು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಪ್ರಧಾನಿ ಮೋದಿ ಅವರ ವಿರುದ್ಧ ಹಗುರವಾಗಿ ನಾಲಿಗೆ ಹರಿಬಿಟ್ಟ ಶಿವರಾಜ ತಂಗಡಗಿ ಅವರಿಗೇ ತಕ್ಷಣಕ್ಕ ಸಚಿವಸ್ಥಾನದಿಂದ ವಜಾಗೊಳಿಸಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್ ಹಾಗೂ ಈರಣ್ಣ ರಾವುರ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ರಾಠೋಡ ಹಾಗೂ ರಾಘವೇಂದ್ರ ಕಾಪಸೆ, ರಾಜಕುಮಾರ್ ಸಗಾಯಿ, ಶಂಕರ ಹೂಗಾರ, ರವಿಚಂದ್ರ ಉಪ್ಪಲದಿನ್ನಿ, ರವಿ ಬಿರಾದಾರ, ಅರುಣ ನಾಯಕ, ಪ್ರೇಮ ಬಿರಾದಾರ, ಜಗದೀಶ ಸುಣಗದ, ರೋಹನ ಆಪ್ಟೆ, ಜ್ಯೋತಿ ಚವಾಣ, ನಗರ ಮಂಡಳಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರವೀಣ ವಂದಾಲಮಠ್ ಪಾಲ್ಗೊಂಡಿದ್ದರು.