ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ

ವಿಜಯಪುರ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಪ್ರಕಾರ ರಾಜ್ಯದ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡದ ನಾಮಲಕಗಳನ್ನು ಶೇ.60ರಷ್ಟು ಅಳವಡಿಸಬೇಕು. ಜಾಹೀರಾತು ಫಲಕಗಳು ಕೂಡಾ ಕನ್ನಡದಲ್ಲಿರಬೇಕು. ಈ ನಿಟ್ಟಿನಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ಕನ್ನಡ ನಾಮಲಕಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲದಿದ್ದರೇ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ರೂಪಿಸಲಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾ. 5ರಂದು ಮನವಿ ಸಲ್ಲಿಸಲಿದ್ದು, ಮನವಿ ಬಳಿಕ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಲಕಗಳು ರಾರಾಜಿಸದಿದ್ದಲ್ಲಿ, ಬೆಂಗಳೂರು ಮಾದರಿಯಲ್ಲಿ ಕರವೇ ಜಿಲ್ಲಾಘಟಕ ಉಗ್ರ ಹೋರಾಟಕ್ಕಿಳಿಯಲಿದೆ ಎಂದರು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ನಿತ್ಯ ವಹಿವಾಟಿನಲ್ಲಿ ತೊಡಗಿರುವ ಉದ್ಯಮಿಗಳು, ವರ್ತಕರು ಸರ್ಕಾರದ ನಿಯಮಾವಳಿ ಪ್ರಕಾರ ನಾಮಲಕಗಳನ್ನು ಬದಲಿಸಿ ಸಂಪೂರ್ಣ ಕನ್ನಡಕರಣಗೊಳಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟದಿಂದ ಹಿಂದೆ ಸರಿಯಲ್ಲ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದಲ್ಲಿ ಕನ್ನಡ ನಾಮ ಫಲಕಗಳು ರಾರಾಜಿಸಬೇಕೆಂಬ ಹಕ್ಕೊತ್ತಾಯ ಮುಂದಿಟ್ಟುಕೊಂಡು, ಈಗಾಗಲೇ ಚಳುವಳಿ ಆರಂಭಿಸಿದೆ. ಕಳೆದ ವರ್ಷ ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಈ ವಿಷಯದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದು ರಾಜ್ಯದ ಜನರಿಗೆ ಗೊತ್ತಿದೆ. ಕನ್ನಡ ನಾಮಲಕ ಅಳವಡಿಸದ ಪರಭಾಷೆಯ ಉದ್ಯಮಿಗಳಿಗೆ ವೇದಿಕೆ ತಕ್ಕ ಪಾಠ ಕಲಿಸಿದ್ದರಿಂದ ಬೆಂಗಳೂರಿನಲ್ಲಿ ಸಾವಿರಾರು ಕನ್ನಡೇತರ ನಾಮಲಕಗಳು ಧರೆಗುರುಳಿದ್ದನ್ನು ಜಿಲ್ಲೆಯ ವರ್ತಕರು ಗಮನಿಸಬೇಕು ಎಂದರು.

ಇದಕ್ಕೆ ಸಂಬಂಧಿಸಿದಂತೆ ನಮ್ಮ ಮೇಲೆ ಹತ್ತಾರು ಪ್ರಕರಣಗಳನ್ನು ದಾಖಲಾದವು. ಆದರೆ ಕರ್ನಾಟಕ ರಕ್ಷಣಾ ವೇದಿಕೆ ಅದಕ್ಕೆ ಕಿಂಚಿತ್ ಹೆದರದೇ, ಮತ್ತೆ ಹೋರಾಟಕ್ಕಿಳಿಯಲಿದೆ. ಈಗಲೂ ನಾಮಫಲಕ ಅಳವಡಿಸಲು ನಿರಾಕರಿಸಿದರೆ ಕರವೇ ಸಹಿಸುವುದಿಲ್ಲ, ಹಾಗಾಗಿ ಪ್ರತಿಯೊಬ್ಬ ವರ್ತಕರು ಕನ್ನಡದಲ್ಲೇ ನಾಮಲಕ ಅಳವಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಮಹಾದೇವ ರಾವಜಿ, ಸುರೇಶ ಬಿಜಾಪುರ, ಎಸ್.ಎಂ. ಮಡಿವಾಳರ, ದಸ್ತಗೀರ ಸಾಲೋಟಗಿ, ಫಯಾಜ್ ಕಲಾದಗಿ ಇದ್ದರು.

Latest Indian news

Popular Stories