ದ್ರಾಕ್ಷಿ ಬೆಳೆಗಾರರ ಸಂಕಷ್ಟ ಪರಿಹರಿಸಿ : ಸರ್ಕಾರಕ್ಕೆ ಮಠಾಧೀಶರ ಒಕ್ಕೊರೆಲಿನ ಒತ್ತಾಯ

ವಿಜಯಪುರ : ದ್ರಾಕ್ಷಿ ಕಣಜ ಎಂದು ಹೆಸರಾಗಿದ್ದರೂ ಸಹ ವಿಜಯಪುರ, ಬಾಗಲಕೋಟೆಯ ದ್ರಾಕ್ಷಿ ಬೆಳೆಗಾರರ ಬದುಕು ಹಸನಾಗಿಲ್ಲ, ಈ ಹಿನ್ನೆಲೆಯಲ್ಲಿ ಸರ್ಕಾರ ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆಗೆ ಅಭಯ ನೀಡಬೇಕು ಎಂದು ಜಿಲ್ಲೆಯ ಹಲವಾರು ಮಠಾಧೀಶರು, ವಿವಿಧ ರೈತಪರ, ಕನ್ನಡಪರ ಸಂಘಟನೆಯ ಸದಸ್ಯರು ಹಕ್ಕೊತ್ತಾಯ ಮಂಡಿಸಿದ್ದಾರೆ.


ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ಕೂಡಲೇ ಸಹಾಯ ನೀಡಲು ಮುಂದಾಗಬೇಕು ಎಂಬ ಸಂದೇಶ ರವಾನಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವರಹಿಪ್ಪರಗಿಯ ಶ್ರೀ ವೀರಗಂಗಾಧರ ಶಿವಾಚಾರ್ಯರು ಮಾತನಾಡಿ, ದ್ರಾಕ್ಷಿ ಬೆಳೆಗಾರರ ಹಿತರಕ್ಷಣೆ ಕಾಪಾಡುವಂತೆ ಈಗಾಗಲೇ ಅನೇಕ ಜನಪ್ರತಿನಿಧಿಗಳಿಗೂ ಮನವಿ ಮಾಡಿಕೊಳ್ಳಲಾಗಿದೆ, ಅವಳಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಬೇಕು ಎಂದರು.


ಇಡೀ ದೇಶದಲ್ಲಿ ದ್ರಾಕ್ಷಿ ಬೆಳೆಗೆ ಮಹಾರಾಷ್ಟ್ರ ರಾಜ್ಯ ಪ್ರಥಮ ಸ್ಥಾನ ಬಿಟ್ಟರೆ ಎರಡನೆಯದ್ದು ಕರ್ನಾಟಕ ರಾಜ್ಯ. ಅದರಲ್ಲಿ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಶೇ.70 ರಷ್ಟು ದ್ರಾಕ್ಷಿ ಬೆಳೆಯಲಾಗುತ್ತಿದೆ, ರುಚಿಕಟ್ಟಾದ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಉಳ್ಳ ದ್ರಾಕ್ಷಿ ವಿಜಯಪುರ ಜಿಲ್ಲೆಯದ್ದಾಗಿದೆ. ಆದರೆ ಒಣ ದ್ರಾಕ್ಷಿಗೆ ಬೆಂಬಲ ಬೆಲೆ ಇಲ್ಲ. ಒಂದು ಕೆ.ಜಿ. ಒಣದ್ರಾಕ್ಷಿಗೆ ಈ ಸದ್ಯದ ಮಾರುಕಟ್ಟೆ ಬೆಲೆ ಪ್ರತಿ ಕೆ.ಜಿ.ಗೆ. ಕೇವಲ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದೆ. ಕಳೆದ ವರ್ಷ ಅಲ್ಪಸ್ವಲ್ಪ ಒಣ ದ್ರಾಕ್ಷಿಗೆ 200 ರಿಂದ 250 ರೂ. ಬೆಲೆ ಇತ್ತು ಆದರೆ ಈ ಭಾರಿ ಸಂಪೂರ್ಣ ಬೆಲೆ ಕುಸಿತ ಕಂಡಿದೆ. ಇದರಿಂದ ದ್ರಾಕ್ಷಿ ಬೆಳೆದ ರೈತರು ತೀವ್ರ ಕಂಗಾಲಾಗಿದ್ದಾರೆ ಎಂಬ ಸಮಸ್ಯೆಯನ್ನು ಗಮನಕ್ಕೆ ತಂದರು.

ಮಕ್ಕಳಿಗೆ ಮನುಕ ನೀಡಿ


ಒಣದ್ರಾಕ್ಷಿ ಉತ್ತಮ ಆರೋಗ್ಯವರ್ಧಕ ಉತ್ಪನ್ನವಾಗಿದೆ, 20 ಕ್ಕೂ ಹೆಚ್ಚು ರೋಗಗಳನ್ನು ಗುಣಪಡಿಸುವ ಪೋಷಕಾಂಶಗಳನ್ನು ಒಣ ದ್ರಾಕ್ಷಿ ಹೊಂದಿದೆ. ಅದರಲ್ಲಿ ವಿಟ್ಯಾಮಿನ್ ಬಿ, ವಿಟ್ಯಾಮಿನ್ ಸಿ, ಗ್ಲೂಕೋಶ್ ಕ್ಯಾಲ್ಸಿಯಂ, ಮ್ಯಾಗ್ನೆಷಿಯಂ, ಪೊಟ್ಯಾಸಿಯಂ,. ಐರಾನ್ ಸೇರಿದಂತೆ ಹಲವಾರು ವಿಟ್ಯಾಮಿನ್ಗಳು ಒಣದ್ರಾಕ್ಷಿಯಲ್ಲಿ ಲಭ್ಯವಿವೆ. ಇದನ್ನು ಮಕ್ಕಳು ಸೇವಿಸುವದರಿಂದ ಅವರಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಆಸ್ಪತ್ರೆಯಲ್ಲಿ ರೋಗಿಗಳು ಕೂಡ ನೀಡಿದರೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಆದ್ದರಿಂದ ಸರ್ಕಾರ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ಕನಿಷ್ಠ 50 ಗ್ರಾಂ ನಷ್ಟು ಮನುಕವನ್ನು (ಒಣದ್ರಾಕ್ಷಿ) ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಚಿಕ್ಕಗಲಗಲಿಯಲ್ಲಿ ಸಭೆ
ಚಿಕ್ಕಗಲಗಲಿಯಲ್ಲಿ ಸೆ.7 ರಂದು ಅವಳಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಬೃಹತ್ ಸಮಾವೇಶ ಸಂಘಟಿಸಲಾಗಿದ್ದು, ಇದು ಪ್ರತಿಭಟನಾ ಸಮಾವೇಶವಲ್ಲ, ಬದಲಿಗೆ ಸರ್ಕಾರಕ್ಕೆ ವಿನಂತಿಪೂರ್ವಕವಾಗಿ ಒತ್ತಾಯಿಸುವ ಸಮಾವೇಶ, ಈ ಸಮಾವೇಶದಲ್ಲಿ ದ್ರಾಕ್ಷಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಬಸವನ ಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಸ್ವಾಮಿಗಳು, ಶ್ರೀ ವಿಶ್ವಪ್ರಭು ಶಿವಾಚಾರ್ಯರು, ಶ್ರೀ ಶಿವಕುಮಾರ ಸ್ವಾಮೀಜಿ, ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ, ರೈತ ಮುಖಂಡರಾದ ಅರವಿಂದ ಕುಲಕರ್ಣಿ, ಸಂಗಮೇಶ ಸಗರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories