ಇಂಡಿಯಾ ಅಲೈನ್ಸ್: ಹಾವು-ಮುಂಗುಸಿ ಸೇರಿ ಮಾಡಿಕೊಂಡ‌ ಅಲೈನ್ಸ್

ವಿಜಯಪುರ: ಇಂಡಿಯಾ ಮೈತ್ರಿಕೂಟ ಹಾವು ಮತ್ತು ಮುಂಗುಸಿಗಳು ಒಟ್ಟಿಗೆ ಸೇರಿಕೊಂಡು ಮಾಡಿಕೊಂಡ ಮೈತ್ರಿಕೂಟವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟದ ಆಮ್‌ ಆದ್ಮಿ ಪಕ್ಷ, ಪಶ್ಚಿಮ ಬಂಗಾಳ ಟಿಎಂಸಿ ಪಕ್ಷ, ಕೇರಳದ ಸಿಪಿಎಂ ಪಕ್ಷಗಳು ದಿನ ಬೆಳಗಾದರೆ ಅವರ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೈಯುತ್ತದೆ, ಆದರೂ ಕಾಂಗ್ರೆಸ್‌ನ ಜೊತೆಗೆ ಮೈತ್ರಿಕೂಟದಲ್ಲಿವೆ ಎಂದರು.

ಹಾವು ಮತ್ತು ಮುಂಗುಸಿಗಳು ಒಟ್ಟಿಗೆ ಇದ್ದರೇ ಸಮ್ಮಿಶ್ರ ಪಡೆಯನ್ನು ಕಟ್ಟಲು ಸಾಧ್ಯವೇ? ಇದೊಂದು ಅನ್ ನ್ಯಾಚುರಲ್ ಅಲೈನ್ಸ್, ಶುರುವಾದಾಗಿನಿಂದ ಪ್ರಾಬ್ಲಂನಲ್ಲಿದೆ ಎಂದು ವ್ಯಂಗ್ಯವಾಡಿದರು.

ಟಿಎಂಸಿ, ಶಿವಸೇನೆಯವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿಯಾಗಲಿ ಎನ್ನುತ್ತಾರೆ, ಆದರೇ ಕಾಂಗ್ರೆಸ್‌ ಪಕ್ಷದವರೇ, ಅದರಲ್ಲೂ ಸಿದ್ದರಾಮಯ್ಯನವರೇ ಅದನ್ನು ಒಪ್ಪುತ್ತಿಲ್ಲ ಹಾಗೂ ಬೆಂಬಲ ಸೂಚಿಸುತ್ತಿಲ್ಲ. ಪ್ರಧಾನಿ ಪಟ್ಟಕ್ಕೆ ಟಿಎಂಸಿ, ಶಿವಸೇನೆ ಅವರು ಖರ್ಗೆ ಹೆಸರು ಸೂಚಿಸಿದ ನಂತರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಮುಜುಗರಕ್ಕೆ ಒಳಗಾಗಿದ್ದಾರೆ. ಅದಕ್ಕೆ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯನವರ ಮೂಲಕ ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿಕೆ‌ ಕೊಡಿಸಿ ಅವರ ಕುಟುಂಬ ಪಾರುಪತ್ಯವನ್ನು ಕಾಂಗ್ರೆಸ್‌ನಲ್ಲಿ ನಿರಂತರವಾಗಿ ಮುಂದುವರೆಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ನಾಯಕರ ಮಧ್ಯ ಒಗ್ಗಟ್ಟಿಲ್ಲ ಇನ್ನೂ ಇವರು ದೇಶದ ಒಗ್ಗಟ್ಟು ತರಲು ಹೇಗೆ ಸಾಧ್ಯ ಎಂದರು.

Latest Indian news

Popular Stories