ಬಿಎಸ್ವೈ ವಿರುದ್ಧ ಮತ್ತೆ ಗುಡುಗಿದ ಯತ್ನಾಳ

ವಿಜಯಪುರ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಒಂದು ರೀತಿ ಬಿ.ಎಸ್.ವೈ. ಕುಟುಂಬದ ಆಸ್ತಿಯಂತಾಗಿದೆ, ಬಿ ಎಂದರೆ ಭೀಮಣ್ಣ ಖಂಡ್ರೆ ಪರಿವಾರ, ಎಸ್ ಎಂದರೆ ಶ್ಯಾಮನೂರ ಪರಿವಾರ ಹಾಗೂ ವೈ ಎಂದರೆ ಯಡಿಯೂರಪ್ಪ ಪರಿವಾರದಂತಾಗಿ ಪರಿವರ್ತನೆಯಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಇನ್ನು ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಮತ್ತೆ ಅಸಮಧಾನ ಹೊರಹಾಕಿರುವ ಯತ್ನಾಳ, ವೀರೈಶವ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರ್ಪಡೆ ಮಾಡಲು ಏಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿಲ್ಲ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಯಡಿಯೂರಪ್ಪ ಅವರಿಗೆ ಸವಾಲು ಹಾಕಿದರು.

ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಹಾಧಿವೇಶನದಲ್ಲಿ ಧರ್ಮದ ಕಲಂನಲ್ಲಿ ವೀರಶೈವ ಹಾಗೂ ಲಿಂಗಾಯತ ಎಂದು ಬರೆಯುವಂತೆ ಕೈಗೊಂಡ ನಿರ್ಣಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಖಿಲ ಭಾರತ ವೀರಶೈವ ಮಹಾಸಭಾ ಕೆಲವೇ ಪರಿವಾರದ ಆಸ್ತಿಯಾಗಿದೆ, ಈ ಎಲ್ಲ ಪರಿವಾರಗಳು ಬೀಗರೇ ಎಂದರು.

ಈ ಎಲ್ಲರೂ ತಮ್ಮ ಜಾತಿ ಕಾಲಂ ನಲ್ಲಿ ಏನು ಬರೆಸಿದ್ದಾರೆ ಎಂಬುದನ್ನು ಹೇಳಲಿ, ಅವರ ಜಾತಿ ಕಾಲಂದಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿಲ್ಲ, ಆದರೆ ಉಳಿದವರಿಗೆ ಈ ರೀತಿ ಬರೆಯಲು ಹೇಳುತ್ತಾರೆ, ಪಂಚಮಸಾಲಿ ಸೇರಿದಂತೆ ಇತರ ಜನಾಂಗದವರಿಗೆ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳಲಾಗುತ್ತಿದೆ, ಆದರೆ ಈ ಕಾರಣದಿಂದ ನಮಗೆ ಹಿಂದುಳಿದ ಯಾವುದೇ ಸೌಲಭ್ಯಗಳು ಸಿಗಲ್ಲ, ಈ ವಿಚಾರದಲ್ಲಿ ಕೂಡಲಸಂಗಮ ಸ್ವಾಮೀಜಿ ಸೇರಿದಂತೆ ಇತರರು ಸೇರಿ ನಿರ್ಧಾರ ಮಾಡುತ್ತೇವೆ ಎಂದರು.

ನಾವು ಜಾತಿ ಕಾಲಂನಲ್ಲಿ ಹಿಂದೂ ಪಂಚಮಸಾಲಿ ಬರಿಸಬೇಕೋ ಹಿಂದೂ ಲಿಂಗಾಯಿತ ಎಂದು ಬರೆಸಬೇಕೆಂಬುದನ್ನ ಶೀಘ್ರವಾಗಿ ಚರ್ಚೆ ಮಾಡುತ್ತೇವೆ ಎಂದರು. ಲಿಂಗಾಯತ ಸಮಾಜದಲ್ಲಿರುವ ಉಪಜಾತಿಯವರು ಯಾರು ವೀರಶೈವ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ಬರೆಸಿಲ್ಲ, ಹೀಗಾಗಿ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ, ವೀರಶೈವ ಲಿಂಗಾಯತ ಮಹಾಸಭಾ ಮಹಾದಿವೇಶನದ ನಿರ್ಣಯ ಕುರಿತು ನಾವು ಚರ್ಚೆ ಮಾಡುತ್ತೇವೆ ಎಂದರು.

ನಾವು ಮೊದಲು ಹಿಂದೂಗಳು:
ನಾವು ಈ ದೇಶದಲ್ಲಿ ಇರುತ್ತೇವೆ ಎಂದರೆ ಮೊದಲು ನಾವು ಹಿಂದೂಗಳು. ವೀರಶೈವ ಲಿಂಗಾಯತ ಪ್ರತ್ಯೇಕ ಮಾಡಿ ದೇಶದಲ್ಲಿ ಮತ್ತೊಂದು ಸಂಘರ್ಷಕ್ಕೆ ನಾವು ಅವಕಾಶ ಕೊಡಲ್ಲ ಎಂದು ಯತ್ನಾಳ ಗುಡುಗಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಸಂದೇಶದಲ್ಲಿ ನಮ್ಮ ಪೂಜ್ಯ ತಂದೆಯವರು ನಾಲ್ಕು ಸಲ ಸಿಎಂ ಅಗಿದ್ದಾರೆ ಎಂದು ಹೇಳಿದ್ದಾರೆ, ಪೂಜ್ಯ ತಂದೆಯವರ ಮಗ ಪೂಜ್ಯನೇ? ಈ ಹಿಂದೆ ಅವರು ಸಿಎಂ ಇದ್ದಾಗ ಏಕೆ ವೀರಶೈವ ಲಿಂಗಾಯತರನ್ನು ಓಬಿಸಿಗೆ ಸೇರಿಸಲು ಕ್ಯಾಬಿನೆಟ್ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಲಿಲ್ಲ, ಈ ಕುರಿತು ರಾಜ್ಯದ ವೀರಶೈವ ಲಿಂಗಾಯತರಿಗೆ ಯಡಿಯೂರಪ್ಪ ಸ್ಪಷ್ಟನೆ ನೀಡಬೇಕು ಎಂದರು ಗುಡುಗಿದರು.

ಸುಮ್ಮನೆ ಡೋಂಗಿ ಮಾಡಿ ನಾಟಕ ಮಾಡಿ ಲಿಂಗಾಯತ ಲೀಡರ್ ಆಗೋಕೆ ಸಮಾವೇಶ ಮಾಡುತ್ತಾರೆ, ವೀರಶೈವ ಲಿಂಗಾಯತರಿಗಾಗಿ ವೀರಶೈವ ಲಿಂಗಾಯತ ಮಹಾಸಭಾದವರು ರಾಜ್ಯದಲ್ಲಿ ಯಾವ ಹೋರಾಟ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ ಯತ್ನಾಳ, ಎಲ್ಲಾದರೂ ಧರಣಿ ಕುಳಿತಿದ್ದಾರಾ ಎಂದು ಪ್ರಶ್ನಿಸಿದರು. ಒಂದು ಮನವಿಯನ್ನ ಕೊಡುವುದು ಬಿಟ್ಟರೆ ವೀರಶೈವ ಮಹಾಸಭಾದಿಂದ ಏನು ಲಾಭವಾಗಿದೆ ಎಂದು ಸವಾಲು ಹಾಕಿದರು.

ಇನ್ನು ಮಾಜಿ ಸಚಿವ ಬಿ.ಸಿ. ಪಾಟೀಲರ ಹೇಳಿಕೆಗೂ ತಿರುಗೇಟು ನೀಡಿದ ಯತ್ನಾಳ, ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆಮೇಲೆ ಯೋಚಿಸಬಹುದು ಎಂದರು.

Latest Indian news

Popular Stories