ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆಗೆ ಶ್ರೀರಕ್ಷೆ: ಸಚಿವ ಎಂ.ಬಿ.ಪಾಟೀಲ

ವಿಜಯಪುರ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಲೋಕಸಭೆ ಚುನಾವಣೆಗೆ ಶ್ರೀರಕ್ಷೆಯಾಗಲಿದ್ದು, ವಿಜಯಪುರದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರದ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸರಕಾರ ನೀಡಿದ್ದ ಆರು ನೂರು ಭರವಸೆಯಲ್ಲಿ ಐದು ನೂರಕ್ಕೂ ಹೆಚ್ಚು ಭರವಸೆಗಳು ಹಾಗೇ ಉಳಿದಿವೆ. ಆದರೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು.

ದೇಶದಲ್ಲಿ ಬಿಜೆಪಿ ದುರಾಡಳಿತದ ಫಲವಾಗಿ ಸಾಮಾನ್ಯರ ಜೀವನ ಸ್ಥಿತಿ ಚಿಂತಾಜನಕವಾಗಿದ್ದು, ಇದೆಲ್ಲ ಮರೆ ಮಾಚಲು ಬರೀ ಭಾವನಾತ್ಮಕ ವಿಚಾರಗಳನ್ನು ಬಿಜೆಪಿಗರು ಪ್ರಸ್ತಾಪಿಸುತ್ತಿದ್ದಾರೆ, ಜನರಿಗೆ ಇವರ ಆಟ ಆರ್ಥವಾಗಿದೆ ಎಂದು ಟೀಕಿಸಿದರು.

ವಿಜಯಪುರ ಲೋಕಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ, ಇದರಲ್ಲಿ ಯಾವ ಸಂಶಯವೂ ಇಲ್ಲ. ಇವರ ಬೆನ್ನಿಗೆ ನಮ್ಮ ಗ್ಯಾರಂಟಿಗಳ ಅಭಯವಿದೆ. ರಾಜ್ಯ ಸರಕಾರದ ಜನಪರ ಆಡಳಿತದ ಬೆಂಬಲವಿದೆ. ಚುನಾವಣೆಯಲ್ಲಿ ಧೈರ್ಯವಾಗಿ ಮತ ಕೇಳುವ ನೈತಿಕ ಹಕ್ಕು ನಮಗಿದೆ. ಪಕ್ಷದ ಎಲ್ಲರೂ ಸಂಘಟಿತರಾಗಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ. ಬಹು ವರ್ಷಗಳ ನಂತರ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಗೆಲ್ಲುವ ಕಾಲ ಕೂಡಿ ಬಂದಿದೆ ಎಂದರು.
ಲೋಕಸಭೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಬಾರಿ ಒಂದು ಅವಕಾಶ ಕರುಣಿಸಬೇಕು ಎಂದು ಕೋರಿದರು.

ಗ್ಯಾರಂಟಿ ಮಂತ್ರ ಜಪಿಸಿದ ಶಾಸಕರು:
ಇದು ಸವಾಲಿನ ಚುನಾವಣೆ, ಈ ಸಲ ನಮ್ಮ ಅಭಿವೃದ್ಧಿ ಕಾರ್ಯಗಳೇ ನಮಗೆ ಗೆಲುವಿನ ‘ಗ್ಯಾರಂಟಿ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಶಾಸಕರು ಹೇಳಿದರು. ಆರು ಜನ ಶಾಸಕರಿದ್ದು, ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ. ಬಿಜೆಪಿಗೆ ಸುಳ್ಳೇ ಬಂಡವಾಳ, ಕಾಂಗ್ರೆಸ್ಗೆ ಜನಪರ ಕೆಲಸಗಳೇ ಆಧಾರ ಎಂದು ಸಭೆಯಲ್ಲಿದ್ದ ನಾಲ್ವರು ಶಾಸಕರು ಹೇಳಿದರು. ಬೂತ್ ಮಟ್ಟದಲ್ಲಿ ಲೋಕಸಭೆ ಚುನಾವಣೆ ಎದುರಿಸೋಣ ಎಂಬ ಅಭಿಪ್ರಾಯ ಕಾಂಗ್ರೆಸ್ ಶಾಸಕರಿಂದ ವ್ಯಕ್ತವಾಯಿತು.

ಶಾಸಕರಾದ ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕದೊಂಡ, ಸುನೀಲಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಡಾ.ಮಕ್ಬೂಲ್ ಬಾಗವಾನ, ಹಮೀದ್ ಮುಶ್ರೀಫ್, ಕಾಂತಾ ನಾಯಕ, ವಿದ್ಯಾರಾಣಿ ತುಂಗಳ, ಸುಭಾಶ ಛಾಯಾಗೋಳ, ಡಿ.ಎಲ್. ಚೌಹಾಣ್, ಮಲ್ಲಣ್ಣ ಸಾಲಿ, ಅರ್ಜುನ ರಾಠೋಡ, ಸುಜಾತಾ ಕಳ್ಳಿಮನಿ, ಎಸ್.ಎಂ.ಪಾಟೀಲ ಗಣಿಹಾರ, ಆರ್.ಆರ್.ಪಾಟೀಲ, ಬಸವರಾಜ ದೇಸಾಯಿ, ಸಿದ್ದು ಗೌಡನವರ, ಈರನಗೌಡ ಬಿರಾದಾರ, ಇಲಿಯಾಸ ಬೋರಾಮಣಿ, ಅಬ್ದುಲ್ ರಜಾಕ್ ಹೊರ್ತಿ, ಕನ್ನಾನ ಮುಶ್ರಿಫ್, ಆರತಿ ಶಹಾಪುರ, ಬಿ. ಎಸ್. ಪಾಟೀಲ ಯಾಳಗಿ, ಮೊಹ್ಮದ್ ರಫೀಕ್ ಟಪಾಲ್ ಪಾಲ್ಗೊಂಡಿದ್ದರು.

Latest Indian news

Popular Stories