ಸರ್ಕಾರಕ್ಕೆ ಪಂಚಮಸಾಲಿ ಜಗದ್ಗುರು ಹಕ್ಕೊತ್ತಾಯ: ನಮಗೆ ಹಸಿವಾಗಿದೆ, ಮೀಸಲಾತಿ ಪ್ರಸಾದ ಕೊಡಿ

ವಿಜಯಪುರ : ಪಂಚಮಸಾಲಿ ಸಮಾಜವನ್ನು ಪ್ರವರ್ಗ ೨ ಎಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಬಜೆಟ್ ಅಧಿವೇಶನದ ನಂತರ ಸಭೆ ಕರೆಯಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು, ಆದರೆ ಎರಡು ತಿಂಗಳು ಉರುಳಿದರೂ ಸಹ ಸಭೆ ಕರೆದಿಲ್ಲ, ಹೀಗಾಗಿ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಪಂಚಮಸಾಲಿ ಹೋರಾಟವನ್ನು ಮುಂದುವರೆಸಲು ನಿರ್ಣಯಿಸಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಸರ್ಕಾರ ರಚನೆಯಲ್ಲಿ ಪಂಚಮಸಾಲಿ ಸಮಾಜದ ಪಾತ್ರ ಅನನ್ಯ, ಸಮಾಜದ ಋಣ ತೀರಿಸಲು ನೂತನ ಸರ್ಕಾರ ಒಂದು ಹೆಜ್ಜೆ ಮುಂದೆ ಇರಿಸಬೇಕು, ಈಗ ನಮಗೆ ಹಸಿವಾಗಿದೆ, ಮೀಸಲಾತಿ ಎಂಬ ಪ್ರಸಾದವನ್ನು ನಮಗೆ ಕೊಡಿ ಎಂದು ಕೇಳಿದ್ದೇವೆ, ಅದನ್ನು ಯಾವ ರೀತಿ ಕೊಡುತ್ತದೆಯೋ ಅದನ್ನು ಸರ್ಕಾರಕ್ಕೆ ಬಿಟ್ಟ ಕೊಟ್ಟ ವಿಷಯ, ಹಾಲುಮತ ಸಮಾಜ ಬಾಂಧವರಿಗೆ ಎಸ್.ಟಿ. ಶಿಫಾರಸ್ಸು ಮಾಡಿದ್ದು ಸ್ವಾಗತಾರ್ಹ, ಅದೇ ತೆರನಾಗಿ ನಮ್ಮ ಸಮಾಜವನ್ನು 2ಎ ಮೀಸಲಾತಿ ಕಲ್ಪಿಸಿ ಎಂದು ಕೇಳುತ್ತಿದ್ದೇವೆ, ಇನ್ನೊಬ್ಬರ ಮೀಸಲಾತಿ ತೆಗೆದು ಕೊಟ್ಟಿರುವುದು ಬಿಟ್ಟಿರುವುದು ನಮಗೆ ಸಂಬಂಧಿಸಿದ ವಿಷಯವಲ್ಲ, ಅದು ಸರ್ಕಾರಕ್ಕೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ, ಸಚಿವರಾದ ಶಿವಾನಂದ ಪಾಟೀಲ ಸೇರಿದಂತೆ ಎಲ್ಲರ ಬೆಂಬಲವೂ ಇದೆ, ಇದು ಸಮಾಜ ಪರವಾದ ಹೋರಾಟ. ರಾಜ್ಯಮಟ್ಟದಲ್ಲಿ ನಡೆಯುವ ಧರಣಿಯಲ್ಲಿ ಎಲ್ಲರೂ ಭಾಗವಹಿಸಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದರು.
ವರ್ಷಾಂತ್ಯದಲ್ಲಿ ಮೀಸಲಾತಿಯನ್ನು ಸರ್ಕಾರ ಕಲ್ಪಿಸಲೇಬೇಕು, ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ. ಪಂಚಮಸಾಲಿ ಮೀಸಲಾತಿ ಹೋರಾಟ ದೇಶದ ಗಮನ ಸೆಳೆದಿದೆ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಮಾಜವನ್ನು ಪ್ರವರ್ಗ 2ಎ ಗೆ ಸೇರ್ಪಡೆ ಮಾಡಬೇಕಾಗಿರುವುದು ಅಗತ್ಯವಾಗಿದೆ. ಹೋರಾಟ ತಾತ್ವಿಕ ಅಂತ್ಯಕ್ಕೆ ಬಂದಿರುವುದು ನಿಜ, ಆದರೆ ಸ್ಪಷ್ಟವಾಗಿ ಮೀಸಲಾತಿ ದೊರಕಬೇಕಿದೆ ಎಂದರು.
ಹೋರಾಟದ ಭಾಗವಾಗಿ ಇದೇ ದಿ.24 ರಂದು ಚಡಚಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ನಡೆಸಲು ನಿರ್ಧರಿಸಲಾಗಿದೆ, ಈ ಹೋರಾಟದಲ್ಲಿ ಸರಿಸುಮಾರು 15 ಸಾವಿರಕ್ಕೂ ಹೆಚ್ಚು ಪಂಚಮಸಾಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.
ಒನ್ ನೇಷನ್ ಒನ್ ಇಲೆಕ್ಷನ್ ಎಂಬುದು ಒಂದು ಉತ್ತಮ ನಿರ್ಧಾರ, ಆಡಳಿತ ಯಂತ್ರ ಚುನಾವಣೆಗಾಗಿಯೇ ಸೀಮಿತವಾಗುವ ಅನೇಕ ಸಾಧ್ಯತೆಗಳೇ ಹೆಚ್ಚು, ಹೀಗಾಗಿ ಆಡಳಿತ ಯಂತ್ರ ಸುಲಭವಾಗಿ ನಡೆಯಲು ಒಂದೇ ಬಾರಿ ಚುನಾವಣೆ ನಡೆಸಲು ಒನ್ ನೇಷನ್ ಒನ್ ಇಲೆಕ್ಷನ್ ಅತ್ಯಂತ ಸೂಕ್ತ ನಿರ್ಧಾರ ಎಂದರು.
ಅದೇ ತೆರನಾಗಿ ಮಹಿಳಾ ಮೀಸಲಾತಿ ಕಲ್ಪಿಸಿದ್ದು ಅಣ್ಣ ಬಸವಣ್ಣನವರು. ಅದರ ಆಧಾರದ ಮೇಲೆ ಅನುಭವ ಮಂಟಪದ ಆಧಾರದ ಮೇಲೆ ಶಾಸನಸಭೆಗಳಲ್ಲಿಯೂ ಮಹಿಳಾ ಮೀಸಲಾತಿಗೆ ನಮ್ಮ ಆಶಯ ಇತ್ತು, ಈಗ ಆಶಯ ಈಡೇರಿರುವುದು ಸಂತೋಷ ತಂದಿದೆ ಎಂದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹೋರಾಟ ಸಂಘಟಿತವಾಗಿ ಮುನ್ನಡೆಯುತ್ತಿದ್ದು, ಅದರ ಭಾಗವಾಗಿ ನಿಡಗುಂದಿ, ತಾಳಿಕೋಟೆ ಸೇರಿದಂತೆ ಹಲವಾರು ತಾಲೂಕಾ ಕೇಂದ್ರಗಳಲ್ಲಿ ಸಭೆ, ಆಂದೋಲನ ನಡೆಸಲು ನಿರ್ಧರಿಸಲಾಗಿದ್ದು, ಚಡಚಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಧರಣಿ ನಡೆಸಲು ಸಹ ನಿರ್ಣಯ ಕೈಗೊಳ್ಳಲಾಗಿದ್ದು, 15 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸಮಾಜದ ಮುಖಂಡರಾದ ದಾನೇಶ ಅವಟಿ, ನಿಂಗನಗೌಡ ಸೊಲ್ಲಾಪೂರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories