ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ: ಪ್ರಹ್ಲಾದ ಜೋಶಿ

ವಿಜಯಪುರ : ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ ಎನ್ನುವ ದುರಹಂಕಾರದಲ್ಲಿ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡಬೇಡಿ, ದೇಶದಲ್ಲಿ ಕೇವಲ 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವಿದೆ ಹಿಮಾಚಲ ಪ್ರದೇಶದಲ್ಲೂ ನಿಮ್ಮ ಸರ್ಕಾರ ಅಲುಗಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.


ಧಾರವಾಡ ಲೋಕಸಭೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಹಿನ್ನೆಲೆ, ನಗರದ ಹೊರವಲಯದಲ್ಲಿರುವ ತೊರವಿ ಶ್ರೀ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಂಡಾ ಎನ್ನುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ನಾವು ಈಗಾಗಲೇ ಎರಡು ಬಾರಿ ಕೇಂದ್ರ ಚುನಾವಣೆಯಲ್ಲಿ ಬಹುಮತ ಪಡೆದುಕೊಂಡು ಸರ್ಕಾರ ನಡೆಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂರುವ ಕೆಲಸ ಮಾಡುತ್ತಿದ್ದರೆ, ಅವರ ಮಗ ಸರ್ಟಿಪೀಕೆಟ್ ನೀಡುವ ಹಂತಕ್ಕೆ ತಲುಪಿದ್ದಾರೆ ಎಂದು ವ್ಯಂಗ್ಯವಾಡಿದರು.


ಅಮಿತ್ ಹಾಗೂ ಮೋದಿ ಅವರ ನೇತೃತ್ವದಲ್ಲಿ ನಾವು ಎರಡು ಬಾರಿ ಚುನಾವಣೆಗಳನ್ನ ಗೆದ್ದಿದ್ದೇವೆ. ಕಾಂಗ್ರೆಸ್ಸಿನವರು ಸೋಲುತ್ತಿವೆಂಬ ಹತಾಶೆಯಿಂದ ಹೀಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಲಕ್ಷ್ಮಣಗೆ ಡಿಪಾಸಿಟ್ ಬಂದರೆ ಸಾಕು ಎನ್ನುವಂತಾಗಿದೆ. ಹತಾಶೆಯಿಂದ ಕೆಟ್ಟ ಭಾಷೆಯನ್ನು ಬಳಕೆ ಮಾಡುತ್ತಿದ್ದಾರೆ ಎಂದರು.
ನಾವು ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಜಯಗಳಿಸುತ್ತೇವೆ. ದೇಶದಲ್ಲಿ ಎನ್ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇವೆ. ಮೋದಿ ಅವರ ಹತ್ತು ವರ್ಷದ ಆಡಳಿತದಲ್ಲಿ ದೇಶದಲ್ಲಾದ ಬದಲಾವಣೆಯನ್ನು ಜನ ಗಮನಿಸಿದ್ದಾರೆ. ದುರ್ಬಲ ಆರ್ಥಿಕತೆಯನ್ನು ಹೊಂದಿದ್ದ ಭಾರತ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ಶಕ್ತಿಯ ದೇಶವಾಗಿದೆ. ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಭಾರತವನ್ನು ಜಗತ್ತಿನ ಮೂರನೇ ಆರ್ಥಿಕ ಬಲಿಷ್ಠ ರಾಷ್ಟ್ರವನ್ನಾಗಿಸುವ ಎಂದು ಮೋದಿ ಗ್ಯಾರಂಟಿ ಕೊಟ್ಟಿದ್ದಾರೆ ಎಂದರು.


ಮೋದಿ ಅವರ ಅಧಿಕಾರದಲ್ಲಿ ಉಗ್ರವಾದ ಬಹಳ ತಗ್ಗಿದ್ದು, ಕಾಶ್ಮೀರದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ವಿಕಸಿತ ಭಾರತವಾಗಲು ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಬೇಕು ಎಂದರು.


ನಮ್ಮ ಮನೆಯಲ್ಲಿ ಯಾವುದೇ ಶುಭ ಸಮಾರಂಭ ನಡೆದರೂ ಕುಟುಂಬ ಸಮೇತವಾಗಿ ಮನೆ ದೇವರ ದರ್ಶನ ಮಾಡುತ್ತೇವೆ. ಚುನಾವಣೆಗೂ ಮುನ್ನ ಹಾಗೂ ಬಳಿಕವೂ ಕುಟುಂಬ ಸದಸ್ಯರು ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ. ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಮುಂಬರುವ 15 ರಂದು ನಾಮಪತ್ರ ಸಲ್ಲಿಸುವೆ.


ನಾಮಪತ್ರ ಸಲ್ಲಿಕೆಗೂ ಮುನ್ನ ಮನೆದೇವರು ಶ್ರೀ ನರಸಿಂಹ ದೇವರ ದರ್ಶನ ಮಾಡುವುದನ್ನು ಪಾಲಿಸಿಕೊಂಡು ಬಂದಿದ್ದೇನೆ.
ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು. ಪ್ರಚಂಡ ಬಹುಮತ ಅವರಿಗೆ ಸಿಗಬೇಕು. ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲು ಹೆಚ್ಚಿನ ಎಂಪಿಗಳು ಬೇಕು. ಆ ಎಂಪಿಗಳ ಪೈಕಿ ನಾನು ಒಬ್ಬ ಇರಬೇಕು ಎನ್ನುವುದು ನನ್ನ ಬಯಕೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪ್ರಹ್ಲಾದ ಜೋಶಿ ಬದಲಾಗಿ ಬೇರೆ ಅಭ್ಯರ್ಥಿ ಹಾಕಿ ಎಂದು ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆ ನೀಡಿರುವುದರ ಕುರಿತು ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಎಲ್ಲಾ ಹೇಳಿಕೆಗಳು ನನಗೆ ಆಶೀರ್ವಾದವಿದ್ದಂತೆ ಅವರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುವೆ. ಇದಕ್ಕಿಂತ ಹೆಚ್ಚಿಗೆ ನಾನು ಏನು ಹೇಳಲ್ಲ ಎಂದರು.
ಸಂಸದ ಜಿಗಜಿಣಗಿ ಹೇಳೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯಪುರ ಎಸ್ಸಿ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅಷ್ಟೇ ಅಲ್ಲ ಬೇರೆ ಯಾರೂ ಸಹಿತ ಬಂಜಾರ ಸಮಾಜದ ಮತ ಬೇಡ ಎಂದು ಹೇಳಲು ಸಾಧ್ಯವಿಲ್ಲ. ಆ ರೀತಿ ಹೇಳಿದರೆ ಅದನ್ನು ಸರಿಪಡಿಸಲಾಗುತ್ತದೆ ಎಲ್ಲಾ ವರ್ಗದ ಮತಗಳು ನಮಗೆ ಬೇಕು ಎಂದರು.

Latest Indian news

Popular Stories