ವಿಜಯಪುರ : ಸಂಘಪರಿವಾರ ಮೊದಲಾದ ಸಂಘಟನೆಗಳು ದೇಶದಲ್ಲಿ ನಿರಂಕುಶ ಪ್ರಭುತ್ವವನ್ನು ಹೇರುವ ವ್ಯವಸ್ಥಿತ ಹುನ್ನಾರ ನಡೆಸುತ್ತಿವೆ, ಧರ್ಮ ನಿರಪೇಕ್ಷ ಸ್ವರೂಪವನ್ನು ಬದಲಿಸಿ ಧರ್ಮಾಧಾರಿತ ಸ್ವರೂಪದ ಸರ್ಕಾರ ಸ್ಥಾಪಿಸಲು ಹವಣಿಸುತ್ತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ. ಸಾಗರ್ ನರೋಣಾ ಖಾರವಾಗಿ ಆಕ್ರೋಶ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಮುನ್ನಡೆಸಲು ಅತಿ ಉತ್ತಮವಾದ ವ್ಯವಸ್ಥೆ ಎಂದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕೆಲವಾರು ಲೋಪ-ದೋಷಗಳು ಇವೆ. ಇವುಗಳನ್ನು ಸರಿಪಡಿಸಿಕೊಳ್ಳಬೇಕೆ ಹೊರತು ಈ ವ್ಯವಸ್ಥೆಯನ್ನ ತಿರಸ್ಕರಿಸುವುದು ವಿವೇಕ ಅಲ್ಲ.ಈಗಿನ ಪ್ರಜಾಪ್ರಭುತ್ವ ಸರ್ಕಾರಕ್ಕೆ ಬದಲು ರಾಜ್ಯಾಡಳಿತ ಪದ್ಧತಿಯನ್ನು ಅಥವಾ ನಿರಂಕುಶ ಪ್ರಭುತ್ವವನ್ನು ಜಾರಿಗೆ ತರುವ ಹುನ್ನಾರ ನಡೆಯುತ್ತಿರುವುದು ಆತಂಕಕಾರಿ ಸಂಗತಿ, ಅಲ್ಪಸಂಖ್ಯಾತರಿಗೆ ನೀಡಲಾಗುವ ಹಕ್ಕು ಮೀಸಲಾತಿಯನ್ನು ರದ್ದು ಮಾಡಲು ಹೊರಟಿರುವ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಬಗ್ಗು ಬಡಿಯಬೇಕಾಗಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿರುವ ಕೋಮುವಾದಿ-ಜಾತಿವಾದಿ ಶಕ್ತಿಗಳನ್ನು ಬಗ್ಗು ಬಡಿಯಲು ಕೆಲಸ ನಡೆಯಬೇಕಿದೆ ಎಂದರು.
ನಮ್ಮ ಸಂವಿಧಾನವು ಭಾರತವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಿದೆ. ಈ ಗುರಿಯನ್ನು ಸಾಧಿಸಲು ಜನರ ಆರ್ಥಿಕ, ಸಾಮಾಜಿಕ, ಭೌತಿಕ ಮತ್ತು ಸಾಂಸ್ಕೃತಿಕ ಜೀವನವನ್ನು ಸುಧಾರಿಸಲು ಪ್ರಜೆಯ ವ್ಯಕ್ತಿತ್ವ ಪರಿಪೂರ್ಣವಾಗಿ ಬೆಳೆದು ವಿಕಾಸವಾಗಬೇಕಾದರೆ ಅವರಿಗೆ ಕೆಲವು ಹಕ್ಕುಗಳನ್ನು ನೀಡಲಾಗಿದೆ. ಇಂತಹ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನ ನೀಡಿದೆ. ಇಂತಹ ಶ್ರೇಷ್ಠ ಸವಿಧಾನದ ಆಶಯಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿರುವುದು ಆತಂಕಕಾರಿ ಎಂದರು.
ಸಂವಿಧಾನ ಉಳಿವಿಗಾಗಿ ಸಿಂದಗಿಯಲ್ಲಿ ಸಮಾವೇಶ ಫೆ.3 ರಂದು
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿಗಾಗಿ ಸಿಂದಗಿ ತಾ.ಪಂ. ಕಚೇರಿ ಆವರಣದಲ್ಲಿ ಯಲ್ಲಿ ಫೆಬ್ರವರಿ 3 ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಶ್ರೀ ಸಂಗಪಾಲ ಬಂತೇಜಿ, ಶ್ರೀ ಅಭಿನವ ಪುಂಡಲಿಂಗ ಮಹಾರಾಜರು, ಶ್ರೀ ನಿತ್ಯಾನಂದ ಮಹಾರಾಜರು, ಶ್ರೀ ವರಲಿಂಗಮಹಾರಾಜರು, ಫಾ.ಸಂತೋಷ ವಿಲ್ಸನ್ ಸಾನಿಧ್ಯದಲ್ಲಿ ಈ ಸಮಾವೇಶ ನಡೆಯಲಿದ್ದು, ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಾಜಿ ಶಾಸಕ ಶರಣಪ್ಪ ಸುಣಗಾರ ಭಾಗವಹಿಸಲಿದ್ದು, ಸಂಘಟನೆಯ ಜಿಲ್ಲಾ ಸಂಚಾಲಕ ಸಿದ್ಧು ರಾಯಣ್ಣವರ ಅಧ್ಯಕ್ಷತೆ ವಹಿಸಲಿದ್ದು, ಡಾ.ಐ.ಎಸ್. ವಿದ್ಯಾಸಾಗರ ವಿಶೇಷ ಉಪನ್ಯಾಸ ಮಂಡಿಸಲಿದ್ದಾರೆ.
ಜಿಲ್ಲಾ ಸಂಚಾಲಕ ಸಿದ್ಧು ರಾಯಣ್ಣವರ, ಪ್ರಮುಖರಾದ ವೈ.ಸಿ. ಮಯೂರ, ವಿಜಯ ಕಾಂಬಳೆ, ಶರಣು ಚಲವಾದಿ, ಅರುಣ ಗವಾರಿ, ಪ್ರಶಾಂತ ತೊರವಿ, ಸಾಯಬಣ್ಣ ದಳಪತಿ, ರಮೇಶ ನಿಂಬಾಳ, ಅವಿನಾಶ ಬಾಣಿಕೋಲ, ರೇವಣಸಿದ್ದ ಮಸಳಿಕೇರಿ, ಧರೆಪ್ಪ ಮಂಡೊಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.