VIJAAPURA | ದೂರು ನೀಡಿದವರಿಂದಲೇ ಹಣ ಕೇಳುವ ವ್ಯವಸ್ಥೆ ಒಂದು ದುರಂತ: ಶಾಸಕ ವಿಠ್ಠಲ ಕಟಕದೊಂಡ ವಿಷಾದ

ವಿಜಯಪುರ : ಹಣ ಕಳುವಾಗಿದೆ ಎಂದು ನೊಂದು ದೂರು ನೀಡಲು ಹೋದವರಿಂದಲೇ ಹಣ ಕೇಳುವಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ಇಂದಿನ ದುರಂತ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ವಿಷಾದಿಸಿದರು.

ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದ ಅವರು, ನಾನು ಶಾಸಕನಾಗಿ ನಿತ್ಯ ಹಲವಾರು ಸಮಸ್ಯೆಗಳನ್ನು ಗಮನಿಸುತ್ತಲೇ ಇದ್ದೇನೆ, ಇತ್ತೀಚಿಗೆ ಮನೆ ಕಳುವಾಗಿದೆ ಎಂದು ವೃದ್ಧೆಯೊಬ್ಬರು ನನ್ನ ಬಳಿ ಬಂದು ತಮ್ಮ ಅಹವಾಲು ಸಲ್ಲಿಸಿದರು. ತಮ್ಮ ಹಣ, ಒಡವೆ ಕಳೆದುಕೊಂಡಿದ್ದೇನೆ ಎಂದು ದೂರು ನೀಡಲು ಹೋದರೆ ಅವರಿಂದಲೇ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಕೇಳಿದಾಗ ದು:ಖವಾಯಿತು, ದೂರು ನೀಡಲು ಬಂದವರಿಂದಲೇ ಹಣ ಪಡೆಯುವ ಮಟ್ಟಕ್ಕೆ ವ್ಯವಸ್ಥೆ ತಲುಪಿರುವುದು ದುರಂತ ಎಂದು ವಿಷಾದಿಸಿದರು.
ಜನರ ಸಮಸ್ಯೆಗಳಿಗೆ ಜನತಾ ದರ್ಶನ ಪರಿಹಾರವಾಗಲಿದ್ದು, ಮುಂಬರುವ ದಿನಗಳಲ್ಲಿ ಸಂಘಟಿಸಲಾಗಿರುವ ದಿನವನ್ನು ನಿರ್ಧರಿಸಿ ಮುಂಚಿತವಾಗಿಯೇ ಸುದೀರ್ಘವಾಗಿ ಪ್ರಚಾರ ಪಡಿಸುವ ಕಾರ್ಯ ನಡೆಯಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಮಾತನಾಡಿ, ಜಿಲ್ಲಾ ಮಟ್ಟದಲ್ಲಿಯೇ ಇತ್ಯರ್ಥವಾಗಬೇಕಾದ ಅನೇಕ ರೀತಿಯ ಸಮಸ್ಯೆಗಳ ದೂರುಗಳು ಬೆಂಗಳೂರಿಗೆ ಬರುತ್ತಿವೆ, ಹೀಗಾಗಿ ಅದನ್ನು ಜಿಲ್ಲಾ ಹಂತದಲ್ಲಿಯೇ ಬಗೆ ಹರಿಸುವ ನಿಟ್ಟಿನಲ್ಲಿ ಈ ಜನತಾ ದರ್ಶನ ಅತ್ಯಂತ ಸೂಕ್ತವಾದ ಕಾರ್ಯಕ್ರಮವಾಗಿದೆ. ಜಮೀನಿನ ಖಾತಾ ಬದಲಾವಣೆಗಾಗಿಯೇ ಅನೇಕರು ಸಾಕಷ್ಟು ತೊಂದರೆ ಎದುರಿಸುವುದನ್ನು ಕಾಣುತ್ತಿದ್ದೇವೆ, ಹೀಗಾಗಿ ಇದನ್ನೆಲ್ಲವನ್ನೂ ಬಗೆ ಹರಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಅಧಿಕಾರಿಗಳು ಮಾನವೀಯತೆ ಬೆಳಕಿನಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ತಾಲೂಕಾ ಮಟ್ಟದಲ್ಲಿ ಜನತಾ ದರ್ಶನ:
ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಮುಂಬರುವ ದಿನಗಳಲ್ಲಿ ತಾಲೂಕಾ ಮಟ್ಟದಲ್ಲಿಯೂ ಜನತಾ ದರ್ಶನ ಕಾರ್ಯಕ್ರಮ ಸಂಘಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು, ತಾಲೂಕಾ ಮಟ್ಟದಲ್ಲಿಯೂ ಸಹ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿಯೇ ಜನತಾ ದರ್ಶನ ನೆರವೇರಿಸಲಾಗುವುದು ಎಂದು ಪ್ರಕಟಿಸಿದರು.
ಇಲಾಖೆಗೆ ನಿತ್ಯ ನೂರಾರು ದೂರುಗಳು ಬರುತ್ತಿವೆ, ಕಂದಾಯ ಇಲಾಖೆ ಕೇಂದ್ರಿಕೃತವಾದರೂ ಸಹ ಜಿಲ್ಲಾಧಿಕಾರಿ ಕಚೇರಿಗೆ ವಿವಿಧ ಇಲಾಖೆಯ ಅಹವಾಲುಗಳು ಬರುತ್ತಿವೆ, ಆಗ ಅದಕ್ಕೆ ಸ್ಪಂದಿಸಿ ಇಲಾಖೆಗೆ ವರ್ಗಾವಣೆ ಮಾಡಿಯೋ ಅಥವಾ ಮೌಖಿಕವಾಗಿಯೋ ಅದನ್ನು ಸ್ಪಂದಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುತ್ತದೆ, ಆದರೆ ಕಾಲನಂತರದಲ್ಲಿ ಸಮಯದ ಅಭಾವ ಮೊದಲಾದ ಕಾರಣಗಳಿಂದ ಆ ಸಮಸ್ಯೆ ಪರಿಹಾರವಾಗಿದೆಯೋ ಇಲ್ಲವೋ ಎಂಬುದು ಫಾಲೋಅಪ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜನರಿಂದಲೇ ನೇರವಾಗಿ ಅಹವಾಲು ಸ್ವೀಕರಿಸಲು ಈ ಜನತಾ ದರ್ಶನ ವೇದಿಕೆಯಾಗಲಿದ್ದು, ಎಲ್ಲ ರೀತಿಯ ಸಮಸ್ಯೆಗಳು ಇಲ್ಲಿ ಪರಿಹಾರವಾಗುತ್ತದೆ ಎಂಬರ್ಥವಲ್ಲ, ಸಿವಿಲ್ ಮೊದಲಾದ ವ್ಯಾಜ್ಯಗಳನ್ನು ಇಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಹೋದರೂ ಸಹ ಅಧಿಕಾರಿಗಳ ಮಟ್ಟದಲ್ಲಿ ನಿರ್ವಹಿಸಬಹುದಾದ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಆಶಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಹೃಷಿಕೇಶ ಭಗವಾನ್ ಸೋನಾವಣೆ ಮಾತನಾಡಿ, ಪೊಲೀಸ್ ಇಲಾಖೆಯನ್ನು ಜನಸ್ನೇಹಿ, ಜನಸ್ಪಂದನೆಯ ಇಲಾಖೆಯಾಗಿ ರೂಪಿಸಲಾಗಿದ್ದು, ಎಲ್ಲ ಇಲಾಖೆಯಲ್ಲಿ ಕ್ಯೂ-ಆರ್ ಕೋಡ್ ಅಳವಡಿಸಲಾಗಿದ್ದು, ಅಲ್ಲಿ ದೊರಕುವ ಅನುಭವವನ್ನು ಹಂಚಿಕೊಳ್ಳಬಹುದಾಗಿದೆ, ಯಾವುದಾದರೂ ಸಮಸ್ಯೆ ಎದುರಾದರೆ ನೇರವಾಗಿಯೇ ನನಗೆ ಸಂಪರ್ಕಿಸಿ, ಸಂಪರ್ಕ ಸಾಧ್ಯವಾಗದೇ ಹೋದರೂ ಮೆಸೆಜ್ ಮೂಲಕವಾದರೂ ನನಗೆ ಗಮನಕ್ಕೆ ತನ್ನಿ ಎಂದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ಅಧಿಕಾರಿಗಳಾದ ವಿಜಯಕುಮಾರ ಆಜೂರ ಮೊದಲಾದವರು ಪಾಲ್ಗೊಂಡಿದ್ದರು.

Latest Indian news

Popular Stories