ವಿಜಯಪುರ: ಬೇಡಿಕೆ ಈಡೇರಿಸಿ ಇಲ್ಲವೆ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಒತ್ತಾಯಿಸಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಜನರು ಆಹೋರಾತ್ರಿ ಧರಣಿಗೆ ಅಣಿಯಾಗಿದ್ದಾರೆ.
ಮೈಸಾಳ ಏತ ನೀರಾವರಿ ಯೋಜನೆ ಜಾರಿ ಹಾಗೂ ಬರಗಾಲ ಪರಿಹಾರ ಮತ್ತು ಬರಗಾಲ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಮಾಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಸಂಖ್ ಗ್ರಾಮದ ಉಪತಹಶೀಲ್ದಾರ ಕಚೇರಿ ಎದುರು ಇಂದಿನಿಂದ ಮೂರು ದಿನಗಳ ಕಾಲ ಆಹೋರಾತ್ರಿ ಧರಣಿ ಆರಂಭಿಸಿದ್ದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ನಮ್ಮ ಬೇಡಿಕೆ ಈಡೇರಿಸಿ ಇಲ್ಲವೆ ನಮಗೆ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಒತ್ತಾಯಿಸಿರುವ ಧರಣಿ ನಿರತರಿಗೆ ಜತ್ ತಾಲೂಕಿನ 62 ಗ್ರಾಮಗಳ ಜನರು ಸಹ ಬೆಂಬಲ ಸೂಚಿಸಿದ್ದಾರೆ.
ಸಾಂಗ್ಲಿ ಜಿಲ್ಲೆಯಲ್ಲೇ ಜತ್ ಅತಿ ದೊಡ್ಡ ತಾಲೂಕಾಗಿದ್ದು ಅದನ್ನು ಮೂರು ಭಾಗಗಳನ್ನಾಗಿ ವಿಂಗಡನೆ ಮಾಡಬೇಕೆಂದು ಆಗ್ರಹಿಸಿದರು. ಮೈಸಾಳ ಏತ ನೀರಾವರಿ ಯೋಜನೆ ನಲವತ್ತು ವರ್ಷವಾದರೂ ಆರಂಭವಾಗಿಲ್ಲಾ, ಶೀಘ್ರದಲ್ಲಿಯೇ ಮೈಸಾಳ ಏತ ನೀರಾವರಿ ಯೋಜನೆ ಆರಂಭಿಸ ಬೇಕು ಹಾಗೂ ಕರ್ನಾಟಕ ರಾಜ್ಯ ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ನೀರು ಪಡೆಯಲು ಒತ್ತಾಯಿಸಿದರು.
ಮಹಾರಾಷ್ಟ್ರ ಸರ್ಕಾರದ ಸಚಿವ ಉದಯ್ ಸಾವಂತ ಈ ಹಿಂದೆ 2022ರಲ್ಲಿ ಹೋರಾಟ ನಡೆದ ಸಂದರ್ಭದಲ್ಲಿ ಹೋರಾಟ ನಡೆದ ಸ್ಥಳಕ್ಕೆ ಆಗಮಿಸಿ, ಆರು ತಿಂಗಳಲ್ಲಿ ನಮ್ಮ ಬೇಡಿಕೆ ಈಡೇರಿಸೋ ಭರವಸೆ ನೀಡಿದ್ದರು. ಆದರೆ ಇದುವರೆಗೂ ನಮ್ಮ ಭರವಸೆಗಳನ್ನು ಈಡೇರಿಸಿಲ್ಲ. ಈಗ ನಮ್ಮ ಬೇಡಿಕೆ ಈಡೇರಿಸಿ ಇಲ್ಲವೇ ನಮಗೆ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.