ಸ್ವಾತಂತ್ರ್ಯ ಹೋರಾಟಕ್ಕೆ ಕ್ವಿಟ್ ಇಂಡಿಯಾ ಚಳವಳಿ ಸ್ಪೂರ್ತಿ: ಮಾಜಿ ಶಾಸಕ ಆಲಗೂರ

ವಿಜಯಪುರ : ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಕ್ವಿಟ್ ಇಂಡಿಯಾ ಚಳವಳಿ ದೊಡ್ಡಮಟ್ಟದ ಸ್ಪೂರ್ತಿ ಹಾಗೂ ಶಕ್ತಿ ತುಂಬಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.
ವಿಜಯಪುರದಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸ್ಮರಣೆ ಪ್ರಯುಕ್ತ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಬ್ರಿಟಿಷರ ವಿರುದ್ಧ ಸಮರದಲ್ಲಿ ಸಾಕಷ್ಟು ವೀರ ಸೇನಾನಿಗಳು ತಮ್ಮ ಪ್ರಾಣವನ್ನು ಅರ್ಪಿಸಿ ನಮಗೆ ಸ್ವಾತಂತ್ರ್ಯ ದೀಕ್ಷೆ ನೀಡಿದ್ದಾರೆ, ಅವರೆಲ್ಲರ ತ್ಯಾಗ, ಬಲಿದಾನವನ್ನು ನಾವು ನಿತ್ಯ ಸ್ಮರಿಸಬೇಕು ಎಂದು ಕರೆ ನೀಡಿದರು.


ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಘೋಷಣೆಯೊಂದಿಗೆ ಮಹಾತ್ಮಾ ಗಾಂಧೀಜಿರವರು 1942 ಆಗಸ್ಟ್ 9ನೇ ತಾರೀಖಿನಂದು ಬ್ರಿಟಿಷರ ವಿರುದ್ಧ ಹೋರಾಟ ಪ್ರಾರಂಭಿಸಿದರು. ಮುಂದೆ ನಮಗೆ ಈ ಹೋರಾಟವೇ ಭಾರತ ಸ್ವಾತಂತ್ರ್ಯ ಹೊಂದಲು ಬುನಾದಿಯಾಯಿತು. ಮಹಾತ್ಮಾ ಗಾಂಧೀಜಿರವರು ಹಮ್ಮಿಕೊಂಡ ಈ ಹೋರಾಟ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗುವಂತೆ ಮಾಡಿತು. ಈ ಹೋರಾಟಗಳಲ್ಲಿ ಅನೇಕ ಜನ ಹೋರಾಟಗಾರರು ತಮ್ಮ ತ್ಯಾಗ ಬಲಿದಾನ ಮಾಡಿ ಇಂದು ನಾವು ಸ್ವತಂತ್ರವಾಗಿ ಬದುಕಲು ದಾರಿ ಮಾಡಿಕೊಟ್ಟರು. ಈ ಮಹಾಪುರುಷರು ಹಾಕಿಕೊಟ್ಟ ದಾರಿ ಅಮೋಘವಾಗಿದ್ದು, ನಾವು ಇಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಹಿರಿಯ ಮುಖಂಡ ಅಬ್ದುಲ್ಹಮೀದ ಮುಶ್ರೀಫ್, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಕೆ.ಎಫ್. ಅಂಕಲಗಿ, ಡಿ.ಎಚ್. ಕಲಾಲ, ವೈಜನಾಥ ಕರ್ಪೂರಮಠ, ಆರತಿ ಶಹಾಪೂರ, ಶಬ್ಬೀರ ಜಹಾಗೀರದಾರ, ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ರಾಜಶೇಖರ ಯಡಹಳ್ಳಿ, ಜಮೀರಅಹ್ಮದ ಬಕ್ಷಿ, ವಿದ್ಯಾರಾಣಿ ತುಂಗಳ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Latest Indian news

Popular Stories