ವಿಜಯಪುರ : ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ ಗ್ರಾಮದಲ್ಲಿ ನಡೆದಿದ್ದ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳು ಇಂದು ವಿಜಯಪುರ ಜಿಲ್ಲಾ ನ್ಯಾಯಾಲಯಕ್ಕೆ ಆಗಮಿಸಿ ವಿಚಾರಣೆ ಎದುರಿಸಿದರು.
ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ, ಗೋಪಾಲ್ ಹಳ್ಳೂರ್, ಮಲ್ಲಿಕಾರ್ಜುನ್ ಅಸೋಡೆ, ಮೂವರು ಪೊಲೀಸ್ ಪೇದೆಗಳು ಸೇರಿದಂತೆ 16 ಆರೋಪಿಗಳು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, 6 ನೇ ಆರೋಪಿ ಬಾಬು ಕಚನಾಳರ್ ಊರ್ಫ್ ಮೆಂಬರ್, ಮಹಾದೇವ ಬೈರಗೊಂಡ ಮೇಲೆ ನಡೆದ ಚಡಚಣ ಗ್ಯಾಂಗ್ ಅಟ್ಯಾಕ್ ವೇಳೆ ಸಾವನ್ನಪ್ಪಿದ ಕಾರಣ 16 ಆರೋಪಿಗಳು ಜಿಲ್ಲಾ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರಾದರು.
ಜಿಲ್ಲಾ ನ್ಯಾಯಾಲಯದ ಸುತ್ತ ಬಿಗಿ ಭದ್ರತೆ
ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಮೊದಲ ಆರೋಪಿ ಮಹಾದೇವ ಬೈರಗೊಂಡ ಕೋರ್ಟಗೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಪೊಲೀಸ್ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಕೋರ್ಟ್ ಆವರಣಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇಟ್ಟಿದ್ದರು. ಯಾವುದೇ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಇನ್ನು ಕೋರ್ಟ್ ಆವರಣದಲ್ಲಿ ಮಾಧ್ಯಮಗಳಿಗೆ ನಿರ್ಭಂದ ಹೇರಲಾಗಿತ್ತು.
ಭೀಮಾತೀರದ ಎರಡು ಪ್ರಬಲ ಗ್ಯಾಂಗುಗಳಾದ ಬೈರಗೊಂಡ ಗ್ಯಾಂಗ್ ಹಾಗೂ ಚಡಚಣ ಗ್ಯಾಂಗಿನ ನಡುವೆ ಎಡಿಜಿಪಿ ಅಲೋಕ್ಕುಮಾರ್ ಮೊನ್ನೆ ರಾಜಿ ಸಂದಾನ ಮಾಡಿಸಿದ್ದರು. ಈ ಸಂಧಾನಕ್ಕು ಮೊದಲು ಕೋರ್ಟ್ಗೆ ಹಾಜರಾಗಲು ನಡಗುತ್ತಲೆ ಬರುತ್ತಿದ್ದ ಮಹಾದೇವ ಈ ಬಾರಿ ಯಾವ ಆತಂಕವೂ ಇಲ್ಲದೇ ಕೋರ್ಟ್ಗೆ ಹಾಜರಾಗಿದ್ದಾನೆ.
ಏನಿದು ಪ್ರಕರಣ?
ಭೀಮಾತೀರದಲ್ಲಿ ನಾಲ್ಕೈದು ದಶಕಗಳಿಂದ ಚಡಚಣ ಹಾಗೂ ಬೈರಗೊಂಡ ಕುಟುಂಬಗಳ ನಡುವೆ ವೈರತ್ವ ಬೆಳೆದುಕೊಂಡು ಬಂದಿದೆ. ಇನ್ನು ಕಳೆದ 2017ರ ಅಕ್ಟೋಬರ್ 30 ರಂದು ಚಡಚಣ ಮಲ್ಲಿಕಾಜೀ ಮಕ್ಕಳಾದ ಧರ್ಮರಾಜ್ ಮೇಲೆ ಆಗಿನ ಚಡಚಣ ಪಿಎಸ್ಐ ಶಸ್ತ್ರಾಸ್ತ್ರ ತಪಾಸಣೆ ನೆಪದಲ್ಲಿ ಹೋಗಿ ಗುಂಡು ಹಾರಿಸಿದ್ದರು ಎಂದು ದೂರು ದಾಖಲಾಗಿತ್ತು, ಇತ್ತ ಆತನ ಸಹೋದರ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದನು. ಈ ಎರಡು ಪ್ರಕರಣಗಳನ್ನ ಧರ್ಮರಾಜ್ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ ನಿಗೂಢ ಹತ್ಯೆ ಎಂದು ಪರಿಗಣಿಸಿ ಸಿಐಡಿ ಕೂಡ ತನಿಖೆ ನಡೆಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು.
ಆರೋಪಿ ಮಹಾದೇವ ಬೈರಗೊಂಡ ಮೇಲೆ ಕನ್ನಾಳ ಕ್ರಾಸ್ ಬಳಿ ಚಡಚಣ ಗ್ಯಾಂಗ್ ಹುಡುಗರು ಅಟ್ಯಾಕ್ ನಡೆಸುವ ಮೂಲಕ ಧರ್ಮರಾಜ್ ಚಡಚಣ, ಗಂಗಾಧರ ಚಡಚಣ ಹತ್ಯೆ ಪ್ರತಿಕಾರಕ್ಕೆ ಯತ್ನಸಿದ್ದರು. ಹೀಗಾಗಿ ಬೈರಗೊಂಡ ಕೋರ್ಟ್ ಗೆ ಹಾಜರಾಗುವ ವೇಳೆ ಮತ್ತೆ ಚಡಚಣ ಗ್ಯಾಂಗ್ ಅಟ್ಯಾಕ್ ಮಾಡುವ ಭೀತಿ ಇತ್ತು. ಇತ್ತೀಚೆಗೆ ಸ್ವತಃ ಎಡಿಜಿಪಿ ಅಲೋಕ್ ಕುಮಾರ್ ಚಡಚಣ ಗ್ಯಾಂಗಿನ ವಿಮಲಾಬಾಯಿ ಹಾಗೂ ಬೈರಗೊಂಡನ ಗ್ಯಾಂಗ್ನ ರಾಜಿ ಸಂಧಾನ ಮಾಡಿಸಿದ್ದಾರೆ.