38 ವಚನಗಳ ನೃತ್ಯ ರೂಪಕ ಪ್ರದರ್ಶನ

ವಿಜಯಪುರ: ಶರಣರ ವಚನಗಳನ್ನು ನಾಟಕ ಮತ್ತು ನೃತ್ಯ ರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಜೀವನದ ಸಾರವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಸಾಧ್ಯ ಎಂದು ಷಣ್ಮುಖಾರೂಢ ಮಠದ ಪೀಠಾಧಿಪತಿ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಮಹಾವಿದ್ಯಾಲಯದ ಕನ್ನಡ ಮತ್ತು ಹಿಂದಿ ವಿಭಾಗ, ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದೇಶದಲ್ಲೇ ಮೊದಲ ಅಖಿಲ ಭಾರತ ಸಾಂಸ್ಕೃತಿಕ ಅಭಿಯಾನ 38 ವಚನಗಳನ್ನು ಆಧಾರಿಸಿದ ನೃತ್ಯ ರೂಪಕ ಪ್ರದರ್ಶನ ಸಮಾರಂಭದಲ್ಲಿ ಅವರು ಮಾತನಾಡಿದರು.


ದೃಶ್ಯ ಮತ್ತು ಶ್ರವ್ಯ ಯುಕ್ತವಾಗಿರುವ ನಾಟಕಗಳಿಗೆ ಬಲುದೊಡ್ಡ ಶಕ್ತಿಯಿದೆ. ನೃತ್ಯರೂಪಕಗಳು ಮನಸ್ಸನ್ನು ನಾಟುತ್ತವೆ. ವಚನ ಸಾಹಿತ್ಯ 12ನೇ ಶತಮಾನದಲ್ಲಿ ಕನ್ನಡದ ಮಟ್ಟಿಗೆ ಹೊಸತನ ಸೃಷ್ಠಿಸಿದೆ. ವಚನಗಳು ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಉನ್ನತಿಗೆ ಸಾಕ್ಷಿಯಾಗಿವೆ. ಅಲ್ಲದೇ, ವಚನಗಳು ದೃಷ್ಟಾಂತದ ರೂಪಕ ಹೊಂದಿವೆ. ಸಾಣೆಹಳ್ಳಿ ಸ್ವಾಮೀಜಿಗಳು ನಾಟಕಗಳ ಮೂಲಕ ಮೂಡಿಸುತ್ತಿರುವ ಕಾರ್ಯ ಶರಣರ ವಚನಗಳನ್ನು ಜನರಿಗೆ ಮುಟ್ಟಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.


ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಶರಣರ ವಚನಗಳನ್ನು ಸಂಗ್ರಹಿಸಿ ಪ್ರಸಾರ ಮಾಡಿದ್ದರಿಂದ ಬಸವಣ್ಣನವರು ಸೇರಿದಂತೆ ನೂರಾರು ಶರಣರ ವಚನಗಳು ನಮಗೆ ಲಭ್ಯವಿವೆ. ಅವರು ವಚನ ಸಾಹಿತ್ಯದ ಗುಮ್ಮಟವಾಗಿದ್ದಾರೆ ಎಂದು ಮಹಾಸ್ವಾಮೀಜಿ ಹೇಳಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಸಾಹಿತ್ಯ ಜನಪರವಾಗಿರುವಂತೆ ವಚನ ಸಾಹಿತ್ಯವನ್ನು ಹೆಚ್ಚೆಚ್ಚು ಪ್ರಸಾರ ಮಾಡಬೇಕು. 12ನೇ ಶತಮಾನದಲ್ಲಿ ಜಿಡ್ಡುಗಟ್ಟಿದ್ದ ವ್ಯವಸ್ಥೆಯನ್ನು ಬಸವಣ್ಣನವರು ವಚನಗಳ ಮೂಲಕ ಜೀವಂತ ಮಾಡಿದ್ದಾರೆ. ವಚನಗಳಲ್ಲಿರುವ ಜೀವನದ ಅನುಭವಾಮೃತ ಕನ್ನಡ ನಾಡಿಗೆ ಶರಣರು ನೀಡಿರುವ ಅಪೂರ್ವ ಕೊಡುಗೆಯಾಗಿವೆ. ವಚನಗಳನ್ನು ಜನರಿಗೆ ಇಷ್ಟವಾಗುವ ಮುದ್ರಣ, ಸಂಗೀತ, ದೃಷ್ಯ ಮಾಧ್ಯಮಗಳ ಮೂಲಕ ಸಿಗುವಂತೆ ಮಾಡಬೇಕು. ಅಲ್ಲದೇ, ಮುಂದಿನ ಪೀಳಿಗೆಗೆ ತಲುಪಿಸಲು ಹಾಗೂ ಸಂರಕ್ಷಿಸಿ ಇಡಲು ಹೊಸ ಆಯಾಮಗಳನ್ನು ಹುಡುಕಬೇಕು ಎಂದು ಹೇಳಿದರು.


ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಸಾಣೆಹಳ್ಳಿ ಮಠಕ್ಕೂ ಬಿ.ಎಲ್.ಡಿ.ಇ ಸಂಸ್ಥೆಗೂ ಅವಿನಾಭಾವ ಸಂಬಂಧವಿದೆ. ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಕಳೆದ 45 ದಿನಗಳಿಂದ ಈ ನೃತ್ಯ ರೂಪಕ ಪ್ರದರ್ಶನ ನಡೆಯುತ್ತಿದೆ. ಸಾಣೆಹಳ್ಳಿ ಸ್ವಾಮೀಜಿಗಳು ನಾಟಕ, ನೃತ್ಯ ರೂಪಕದಂಥ ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ಶರಣರ ಬದುಕು, ಸಾಹಿತ್ಯವನ್ನು ಹೆಚ್ಚೆಚ್ಚು ಜನರನ್ನು ತಲುಪುವಂತೆ ಮಾಡುತ್ತಿದ್ದಾರೆ. ಕಥೆ, ಕಾದಂಬರಿ, ನಾಟಕ, ಪ್ರಹಸನ, ಸಂಗೀತದಂಥ ಅಭಿಯಾನಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. 1927ರಲ್ಲಿ ಹಳಕಟ್ಟಿ ಅವರು ಸಂಗೀತದ ಮೂಲಕ ವಚನಗಳನ್ನು ಪ್ರಸಾರ ಮಾಡಲು ಮೊದಲ ಪ್ರಯತ್ನ ಮಾಡಿದ್ದಾರೆ. ಈಗ ಈ ನೃತ್ಯ ರೂಪಕ 13 ರಾಜ್ಯಗಳಲ್ಲಿ ಪ್ರದರ್ಶನ ಕಂಡಿದೆ. ಮಕ್ಕಳಾದಿಯಾಗಿ ಯುವಕರನ್ನೊಳಗೊಂಡ 24 ಜನ ಕಲಾವಿದರ ತಂಡ ಈವರೆಗೆ ಸುಮಾರು 8 ರಿಂದ 10 ಸಾವಿಕ ಕಿ. ಮೀ. ಪ್ರಯಾಣ ಮಾಡಿ ನೃತ್ಯ ರೂಪಕ ಪ್ರದರ್ಶನ ಮಾಡಿದ್ದು, 2 ಲಕ್ಷಕ್ಕಿಂತ ಹೆಚ್ಚು ಪ್ರೇಕ್ಷಕರು ಇದನ್ನು ವೀಕ್ಷಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ 15 ದಿನಗಳಿಂದ ಸತತ ಪ್ರದರ್ಶನ ನಡೆದಿದೆ ಎಂದು ತಿಳಿಸಿದರು.


ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಮಾತನಾಡಿ, ವಚನಗಳನ್ನು ನೃತ್ಯ ರೂಪಕದಲ್ಲಿ ಪ್ರದರ್ಶನ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇಂಥ ಪ್ರಯತ್ನಗಳಿಂದಾಗಿ ಶರಣರ ವಚನಗಳು ಜನರ ಮನಸ್ಸಿನಲ್ಲಿ ಉಳಿಯಲಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ. ವಿ. ಡಿ. ಐಹೊಳ್ಳಿ ನಿರೂಪಿಸಿ ವಂದಿಸಿದರು.


ಇದೇ ವೇಳೆ, ನೃತ್ಯರೂಪಕ ಪ್ರದರ್ಶನ ಮಾಡುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಮಠದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಬಿ.ಎಲ್.ಡಿ.ಇ ಸಂಸ್ಥೆಯ ವತಿಯಿಂದ ರೂ. 10 ಲಕ್ಷದ ಚೆಕ್ ನ್ನು ಕಲಾ ಸಂಘದ ಸಂಚಾಲಕ ವೈ. ಎಸ್. ಬದಾಮಿ, ಸಂಯೋಜಕಿ ಸ್ನೇಹಾ ಕಪ್ಪಣ್ಣವರ ಅವರಿಗೆ ವಿತರಿಸಲಾಯಿತು.

Latest Indian news

Popular Stories