ಕಾಂಗ್ರೆಸ್ ಹಠಾವೋ ತಾಂಡಾ ಬಚಾವೋ ಆಂದೋಲನ: ಮಹೀಂದ್ರಕುಮಾರ್

ವಿಜಯಪುರ : ಕಾಂಗ್ರೆಸ್ ಸರ್ಕಾರ ಬೋವಿ, ಬಂಜಾರ ಸಮುದಾಯಗಳಿಗೆ ಅನ್ಯಾಯ ಮಾಡಿ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಹುನ್ನಾರ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್ ಹಠಾವೋ ತಾಂಡಾ ಬಚಾವೋ ಆಂದೋಲನ ನಡೆಸುತ್ತೇವೆ ಎಂದು ಬಿಜೆಪಿ ಮುಖಂಡ ಮಹೀಂದ್ರಕುಮಾರ್ ನಾಯಿಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಸಲಾತಿ ವರ್ಗೀಕರಣದಲ್ಲಿ ಭೋವಿ, ಬಂಜಾರ ಸಮುದಾಯಗಳಿಗೆ ಬಿಜೆಪಿಯಿಂದ ಯಾವುದೇ ಅನ್ಯಾಯ ಆಗಿಲ್ಲ. ಬಸವರಾಜ ಬೋಮ್ಮಾಯಿ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.15 ರಿಂದ 17 ಕ್ಕೆ ಹೆಚ್ಚಿಸಿದೆ. ಅದನ್ನು ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಅಧಿಕೃತಗೊಳಿಸಿದೆ. ನೇಮಕಾತಿ, ಬಡ್ತಿ, ಬ್ಯಾಕ್ಲಾಗ್ ಭರ್ತಿಯಲ್ಲಿ ಶೇ.17 ಎಸ್ಸಿ ಮೀಸಲಾತಿ ಚಾಲ್ತಿಯಲ್ಲಿದೆ. ಆದರೆ ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿರುದ್ಧ ಸುಳ್ಳು ಸುದ್ದಿ ಹರಡಿ ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಗೆದ್ದಿದೆ. ಈಗ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ ಮಾಡಿ ನಮ್ಮ ಸಮುದಾಯಕ್ಕೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಮಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸುಧಿರ್ಘ ಅಧ್ಯಯನ ನಡೆಸಿ 2011ರ ಕೇಂದ್ರ ಸರ್ಕಾರದ ಜನಗಣಿತಿ ಅಂಕಿ-ಅಂಶಗಳ ಆಧಾರದ ಮೇಲೆ ವರ್ಗೀಕರಣ ಸೂತ್ರ ಸಿದ್ಧಪಡಿಸಿತು. 101 ಎಸ್ಸಿ ಜಾತಿಗಳ ಒಟ್ಟು ಜನಸಂಖ್ಯೆಗೆ ಶೇ.17 ರಷ್ಟು ಮೀಸಲಾತಿ ಘೋಷಣೆ ಮಾಡಿತು. ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳ ಒಟ್ಟು ಜನಸಂಖ್ಯೆ 26.50 ಲಕ್ಷ ಇರುವುದರಿಂದ ಶೇ. 4.5 ಮೀಸಲಾತಿ ನಿಗದಿಪಡಿಸಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿತು. ಇದರಿಂದ ಈ ಸಮುದಾಯಗಳಿಗೆ ನ್ಯಾಯ ಸಿಕ್ಕಿರವುದು ಸ್ಪಷ್ಟ . ಈ ಶಿಪಾರಸ್ಸು ನ್ಯಾಯಯುತವಾಗಿದೆ ಎಂದರು.
ಸಿದ್ಧರಾಮಯ್ಯ ಸರ್ಕಾರ ದಲಿತರ ಮೀಸಲು ನಿಧಿ 11,144 ಕೋಟಿ ರೂ. ಹಣವನ್ನು ಲಪಟಾಯಿಸಿ ತನ್ನ ಬಿಟ್ಟಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಇದು 101 ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಮಾಡಿರುವ ಮಹಾದ್ರೋಹ. ಸಂವಿಧಾನದಲ್ಲಿ ನೀಡಿರುವ ಮೀಸಲಾತಿಗೆ ಯಾವುದೇ ಒಳ ಮೀಸಲಾತಿ ನೀಡುವಂತಿಲ್ಲ ಎಂದು ಡಾ.ಬಿ.ಆರ್.ಆಂಬೇಡ್ಕರ್ ಸ್ಪಷ್ಟಪಡಿಸಿದ್ದಾರೆ. ಆದರೆ ಕಾಂಗ್ರೆಸ್ ದಲಿತರ ದಾರಿ ತಪ್ಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಬಂಜಾರ ಸಮಾಜದ ಕೇಸರಟ್ಟಿಯ ಸೋಮಲಿಂಗ ಮಹರಾಜರು ಮಾತನಾಡಿ, ಮುಂಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದು ಖಂಡನೀಯ. ಇದರಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗಲಿದೆ. ನಮ್ಮ ಸಮಾಜ ಅತ್ಯಂತ ಸೌಮ್ಯ ಹಾಗೂ ಶಾಂತಿಯುತವಾದ ಸಮಾಜವಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ತಾಂಡಾದ ಜನರನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಮಾಜಿಕವಾಗಿ ಮೇಲೆ ಬರದಂತೆ ವ್ಯವಸ್ಥಿತ ಶಡ್ಯಂತರ ಮಾಡುತ್ತಿದೆ. ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಲು ನಾವು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಂಜಾರ ಸಮಾಜದ ಅಧ್ಯಕ್ಷ ರಾಜಪಾಲ ಚವ್ಹಾಣ, ರಾಜು ಚವ್ಹಾಣ, ಭೀಮಶಿಂಗ್ ರಾಠೋಡ, ಸುರೇಶ ಬಿಜಾಪುರ, ಬಂಜಾರ ಕ್ರಾಂತಿದಳದ ಅಧ್ಯಕ್ಷ ಶಂಕರ ಚವ್ಹಾಣ, ಬಿ.ಬಿ.ಲಮಾಣಿ, ರಾಜು ಜಾಧವ, ಬಂಜಾರ ಸಮಾಜದ ಮಹಿಳಾ ಮುಖಂಡರಾದ ಶಾರದಾ ಚವ್ಹಾಣ ಉಪಸ್ಥಿತರಿದ್ದರು.

Latest Indian news

Popular Stories