Vijayapura | ಕುಡಿಯುವ ನೀರಿನ ಉದ್ದೇಶಕ್ಕಾಗಿ 1.8 ಟಿಎಂಸಿ ನೀರು ಬಿಡುಗಡೆ

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಫೆ.19ರಿಂದ ಮಾರ್ಚ 10ರವರೆಗೆ ಮುಳವಾಡ ಏತ ನೀರಾವರಿಯ ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 96 ಕೆರೆಗೆಳಿಗೆ 1.8 ಟಿಎಂಸಿ ನೀರು ಕುಡಿಯುವ ಉದ್ಧೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಕೊನೆಯಂಚಿನವರೆಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ನೀರು ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಅನ್ಯ ಉದೇಶಕ್ಕಾಗಿ ಬಳಸದೇ ಇರುವಂತೆ ನೋಡಿಕೊಂಡು ಕಾಲುವೆ ಜಾಲದ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಪೂರ್ಣ ಭರ್ತಿಗೆ ಕ್ರಮವಹಿಸಬೇಕು ಎಂದು ಹೇಳಿದರು.

ಕಾಲುವೆಯ ಮಾರ್ಗಗಳ ನಿರ್ವಹಣೆಯನ್ನು ಆಯಾ ತಾಲೂಕಿನ ತಹಶೀಲ್ದಾರ್ಗಳು ತಂಡಗಳನ್ನು ರಚಿಸಿಕೊಂಡು ನಿಗಾವಹಿಸಬೇಕು. ಪ್ರತಿ ಪಂಚಾಯತ್ ವ್ಯಾಪಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗಿದೆ. ಅನ್ಯ ಚಟುವಟಿಕೆಗಳಿಗೆ ಬಳಸದಂತೆ ಡಂಗೂರ ಸಾರಿಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಬೇಕು. ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ವಾಚ್ ಮತ್ತು ವಾರ್ಡ ಮಾಡಬೇಕು. ಇದಕ್ಕಾಗಿ ತಂಡ ರಚಿಸಿಕೊಂಡು ಕೊನೆಯಂಚಿನವರೆಗೆ ನೀರು ತಲುಪಿಸಲು ಸಂಬಂಧಿಸಿದ ಇಲಾಖೆಯವರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಸಲು ಆದ್ಯತೆ ಮೇಲೆ ಭೂತನಾಳ ಕೆರೆ ತುಂಬಿಸಲು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ನೀರು ಪೋಲಾಗದಂತೆ ಹಾಗೂ ಕೆರೆಯ ಕೊನೆ ಅಂಚಿಗೆ ನೀರು ತಲುಪುವಂತೆ ವಿಜಯಪುರ ಹಾಗೂ ಇಂಡಿ ವಿಭಾಗದ ಉಪ ವಿಭಾಗಧಿಕಾರಿಗಳು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಪ್ರತಿ ದಿನದ ವರದಿಯನ್ನು ಚಿತ್ರ ಸಮೇತ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಒಟ್ಟು 96 ಕೆರೆಗಳಿಗೆ ನೀರಿನ ಅವಶ್ಯಕತೆ ಇದೆ. ಅವುಗಳನ್ನು ತುಂಬಿಸುವಲ್ಲಿ ಗ್ರಾಮ ಪಂಚಾಯತ್ ಅಧಿಕಾರಿ, ಸಣ್ಣ ನೀರಾವರಿ ಇಲಾಖೆ, ತಾಲೂಕು ಪಂಚಾಯತ್ ಇಓ, ಪೊಲೀಸ್ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಆಯಾ ಪ್ರದೇಶದ ಮಾಹಿತಿ ಹೊಂದಿರುವ ಹಿನ್ನಲೆಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಬೇಕು. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಉದ್ಭವವಾದರೆ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಪ್ರೋಬೇಷನರ್ ಐಪಿಎಸ್ ಅಧಿಕಾರಿ ಶಾಲೂ, ಡಿವೈಎಸ್ಪಿ ಬಸವರಾಜ್ ಎಲಿಗಾರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಇಂಡಿ ಉಪ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸೇರಿದಂತೆ ವಿವಿಧ ತಾಲೂಕಿನ ತಹಶೀಲ್ದಾರ, ತಾಲೂಕಿನ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿರಿದ್ದರು. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories