ಬಿಸಿಲಿಗೆ ಬಸವಳಿದ ವಿಜಯಪುರ ಜನತೆ

ಸಮಿ, ವಿಜಯಪುರ
ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ರಣ ಬಿಸಿಲಿಗೆ ಜನತೆ ಹೈರಾಣಗೊಂಡಿದ್ದು, ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಈ ಬಾರಿ ಆರಂಭದಲ್ಲಿಯೇ ಸೂರ್ಯನ ಅಬ್ಬರ ಅಧಿಕವಾಗಿದ್ದು ಫೆಬ್ರವರಿ ತಿಂಗಳಲ್ಲಿಯೇ ಜನತೆ ಈ ಬಾರಿ ಭಾರಿ ಬಿಸಿಲಿನ ಅನುಭವಕ್ಕೊಳಗಾಗಿ ಮಾರ್ಚ್ನಲ್ಲಿ ಇನ್ನೂ ಪರಿಸ್ಥಿತಿ ಬಿಗಡಾಯಿಸಬಹುದು ಎಂದುಕೊಂಡಿದ್ದರು, ಅದರಂತೆಯೇ ಮಾರ್ಚ್ ತಿಂಗಳಲ್ಲಿಯೇ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.

ವಿಜಯಪುರ ನೆಲ ಕಾದ ಕಾವಲಿಯಂತಾಗಿದೆ. ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಿರುವ ಹೊತ್ತಿಗೆ ಹೊರಗಡೆ ನೋಡಲಾರದಷ್ಟು ತೀವ್ರತೆಯ ಬಿಸಿಲು ಗೋಚರಿಸುತ್ತಿದೆ. ಹೀಗಾಗಿ ಅನೇಕರು ಬೆಳಿಗ್ಗೆಯೇ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮಧ್ಯಾಹ್ನದ ವೇಳೆಗೆ ಮನೆ ಸೇರುವಂತಾಗಿದೆ.

ಸದಾ ಜನಜಂಗುಳಿಯಿಂದ ಗೀಜಗುಡುವ ವಿಜಯಪುರ ನಗರದ ಗಾಂಧಿವೃತ್ತ, ಮಾರುಕಟ್ಟೆ ಪ್ರಾಂಗಣ, ಕೇಂದ್ರ ಬಸ್ ನಿಲ್ದಾಣ ಮೊದಲಾದ ಭಾಗಗಳಲ್ಲಿ ಮಧ್ಯಾಹ್ನ ಒಂದು ರೀತಿ ಕರ್ಪ್ಯೂ ಸದೃಶ್ಯ ವಾತಾವರಣ ಗೋಚರಿಸುತ್ತಿದೆ. ವಿರಳ ವಾಹನ ಸಂಚಾರ, ಜನಸಂಚಾರ ಕಡಿಮೆ ಕಂಡು ಬರುತ್ತಿದೆ.

ಅನೇಕ ಅಂಗಡಿಕಾರರು ಸಹ ಮಧ್ಯಾಹ್ನ ಜನರು ಬರುವುದಿಲ್ಲ ಎಂದು ಷಟರ್ ಎಳೆದು ಮನೆ ಮುಖ ನೋಡುವಂತಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಸಹ ಜನಸಂದಣಿ ಕಂಡು ಬರುತ್ತಿಲ್ಲ. ಅನೇಕರು ಉದ್ಯಾನವನಗಳಿಗೆ ಅರಸಿ ಗಿಡದ ನೆರಳಿನಲ್ಲಿ ಆಶ್ರಯ ಪಡೆದು ನಿದ್ರಿಸುವಂತಾಗಿದೆ. ಹೀಗಾಗಿ ಆನಂದ ಮಹಲ್, ಬಾರಾಕಮಾನ್, ಗೋಳಗುಮ್ಮಟ ಉದ್ಯಾನವನ, ಜೋಡಗುಮ್ಮಟ ಹೀಗೆ ತಂಪಾದ ಪ್ರದೇಶಗಳಲ್ಲಿ ಅನೇಕರು ಬಿಸಿಲಿನಿಂದ ಬಸವಳಿದು ವಿಶ್ರಾಂತಿ ಪಡೆಯುತ್ತಿರುವು ದೃಶ್ಯ ಸಾಮಾನ್ಯವಾಗಿದೆ.
ಮೂಲೆ ಸೇರಿದ್ದ ಕೂಲರ್ಗಳು ಈಗ ಮತ್ತೆ ಸ್ಥಾನಕ್ಕೆ ಮರಳಿವೆ, ಅನೇಕರು ವರ್ಷಪೂರ್ತಿ ಇರಿಸಿದ್ದ ಕೂಲರ್ಗಳ ಹುಲ್ಲು, ಬೆಂಡ್ಗಳನ್ನು ಬದಲಾಯಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕೂಲರ್, ಎ.ಸಿ., ಫ್ಯಾನ್ಗಳಿಗೆ ಒಂದು ರೀತಿ ರೆಸ್ಟ್ಲೆಸ್ ಕೆಲಸವಾಗಿದೆ. ಜ್ಯೂಸ್ ಅಂಗಡಿ, ಕಲ್ಲಂಗಡಿ, ತಂಪು ಪಾನೀಯಗಳ ಮಾರಾಟ ಭರ್ಜರಿಯಾಗಿಯೇ ನಡೆದಿದೆ.

`ಏನ್ ಬಿಸಲಲ್ರೀ.. ಪಾ ಇದು ರಣ ಬಿಸಿಲು, ವರ್ಷದಿಂದ ವರ್ಷಕ್ಕ ಹೆಚ್ಚೇ ಆಗಾ ಕತ್ತದ ಹೊರತು ಕಡಿಮೆ ಅನ್ನೂ ಮಾತೇ ಇಲ್ಲ, ಒಂದ ಮಳಿ ಬಂದರ ಸ್ವಲ್ಪ ನೆಲ ತಂಪ ಆಗ್ತದ್ರೀ…. ಹೊರಗಂತೂ ಅಡ್ಡಾಡೂದು ದೂರ ಉಳಿತು, ಅಷ್ಟ ಸಾಕ ಆಗೇತ್ರೀ…. ಎಂದು ಅನೇಕರು ಬಿಸಿಲಿನ ಕುರಿತು ಮಾತುಗಳನ್ನಾಡುತ್ತಿದ್ದಾರೆ.
ಸಿಗ್ನಲ್ಗಳಲ್ಲಿ ಬಿಸಿಲಿನ ಪ್ರತಾಪ….
ಎಲ್ಲೆಡೆ ಬಿರುಬಿಸಿಲಿನಿಂದ ಜನತೆ ತಾಪತ್ರಯ ಅನುಭವಿಸವಂತಾಗಿದೆ. ಇಂತಹ ಬಿಸಿಲಿನಲ್ಲಿ ವಾಹನ ಚಾಲನೆ ಅದರಲ್ಲೂ ದ್ವಿಚಕ್ರ ವಾಹನ ಚಾಲನೆಯಂತೂ ಕಷ್ಟದ ಕೆಲಸ. ಅದರಲ್ಲಿ ಸಿಗ್ನಲ್ಗಳಲ್ಲಿ ಎರಡು ನಿಮಿಷ ನಿಲ್ಲುವುದು ಬೈಕ್ ಸವಾರರಿಗೆ ಜೀವ ಕೈಯಲ್ಲಿ ಹಿಡಿದ ಅನುಭವ. ಈ ಹಿಂದೆ ಬೇಸಿಗೆ ಬಂದರೆ ಸಿಗ್ನಲ್ಗಳಲ್ಲಿ ಗ್ರೀನ್ ಶೀಟ್ ಅಳವಡಿಸಲಾಗುತ್ತಿತ್ತು. ಹೀಗಾಗಿ ಎಷ್ಟು ಹೊತ್ತು ಬೇಕಾದರೂ ಸವಾರರು ನಿಲ್ಲಬಹುದಿತ್ತು. ಆದರೆ ಈಗ ಇನ್ನೂ ಗ್ರೀನ್ ಶೀಟ್ ಅಳವಡಿಸಿಲ್ಲ, ಇಂತಹ ಸಂದರ್ಭದಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ ನಿಲ್ಲುವುದು ಎಲ್ಲ ವಾಹನ ಸವಾರರಿಗೂ ಕಷ್ಟದಾಯಕವಾಗಿದೆ. ವಿಜಯಪುರ ಬಸವೇಶ್ವರ ವೃತ್ತ, ಗಾಂಧಿಚೌಕ್, ಅಥಣಿ ರಸ್ತೆ ಹೀಗೆ ಅನೇಕ ಸಿಗ್ನಲ್ಗಳಲ್ಲಿ ಬಿಸಿಲಿನಲ್ಲಿ ನಿಲ್ಲುವುದು ತೊಂದರೆ ಸೃಜಿಸಿದೆ.

ಹೀಗಾಗಿ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಸಿಗ್ನಲ್ ವಿನಾಯ್ತಿ ನೀಡಬೇಕು, ಇಲ್ಲವಾದರೆ ನಗರದ ಎಲ್ಲ ಟ್ರಾಫಿಕ್ ಸಿಗ್ನಲ್ಗಳಲ್ಲಿ ಕೂಡಲೇ ಹಸಿರು ಹೊದಿಕೆ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅನೇಕ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Latest Indian news

Popular Stories