ಎಲ್ಲರೂ ತಪ್ಪದೇ ಮತದಾನ ಮಾಡಿ: ಜಿ.ಪಂ. ಸಿಇಓ ರಿಷಿ ಆನಂದ

ವಿಜಯಪುರ: ನಮಗಾಗಿ, ನಮ್ಮ ಭವಿಷ್ಯಕ್ಕಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ತಾಲೂಕ ಆಡಳಿತ ಹಾಗೂ ತಾಲೂಕ ಸ್ವೀಪ್ ಸಮಿತಿ ಇಂಡಿ ಇವರ ಸಹಯೋಗದಲ್ಲಿ ಲೋಕಸಭಾ ಚುನಾವಣೆ-2024ರ ಹಿನ್ನೆಲೆಯಲ್ಲಿ ಇಂಡಿ ತಾಲೂಕಿನ ಮಿನಿ ಆಡಳಿತ ಸೌಧದಿಂದ ರಂಗೋಲಿ ವೀಕ್ಷಣೆ ಹಾಗೂ ಹೀಲಿಯಂ ಬಲೂನ್ ಹಾರಿಸುವುದರ ಮೂಲಕ ಮತದಾನ ಜಾಗೃತಿ ಜಾಥಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ನಿಮ್ಮ ಪ್ರತಿಯೊಂದು ಮತ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುತ್ತ ಮುತ್ತಲಿನ ಎಲ್ಲ ಜನರಿಗೂ ಸಹ ಮತದಾನ ಮಾಡುವಂತೆ ತಿಳಿಸಬೇಕು. ಮತದಾನದ ದಿನದಂದು ಕಡ್ಡಾಯವಾಗಿ ಮತಗಟ್ಟೆಗಳಿಗೆ ಬಂದು ಎಲ್ಲರೂ ಮತದಾನ ಮಾಡಬೇಕು ಎಂದರು.

ಇಂಡಿ ತಾಲೂಕು ಉಪ ವಿಭಾಗಾಧಿಕಾರಿಗಳಾದ ಅಭಿದ ಗದ್ಯಾಳ ಮಾತನಾಡಿ, ಲೋಕಸಭಾ ಚುನಾವಣೆ-2024ರಲ್ಲಿ ಶೇ.100 ರಷ್ಟು ಮತದಾನ ಆಗಬೇಕು. ಪ್ರತಿಯೊಬ್ಬರೂ ಮತದಾನ ಮಾಡಿ. ಯಾರು ಮತದಾನದಿಂದ ಹೊರಗುಳಿಯಬಾರದು. ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಿ ಮತದಾನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದರು.

ತಾಲೂಕ ಆಡಳಿತ ಸೌಧದಿಂದ ತಾಲೂಕ ಪಂಚಾಯತಿ ಕಾರ್ಯಾಲಯದವರೆಗೆ ಮೊದಲಿಗೆ ರಂಗೋಲಿ ಚಿತ್ರಗಳಿಂದ ಪ್ರಾರಂಭವಾಗಿ ಹೀಲಿಯಂ ಬಲೂನ್ ಹಾರಿಸುವುದು, 400 ಮೀಟರ ಉದ್ದದ ಪ್ರಜಾಪ್ರಭುತ್ವ ಹಬ್ಬ, ನನ್ನ ಮತ ನನ್ನ ಹಕ್ಕು ಧ್ವಜದ ಮೆರವಣಿಗೆ, ಮತದಾನ ಜಾಗೃತಿ ರಥ ಯಾತ್ರೆ, ಸ್ವಚ್ಛವಾಹಿನಿಗಳಲ್ಲಿ ಮತದಾನ ಜಾಗೃತಿಯ ಜಿಂಗಲ್ಸ್ ಹಾಡುಗಳ ಪ್ರಸಾರ, ಸಾಂಪ್ರದಾಯಿಕ ಗೊಂಬೆಗಳ ಪ್ರದರ್ಶನ, ಮತದಾನ ಜಾಗೃತಿಯ ಪ್ಲೇಕಾರ್ಡ್ ಗಳನ್ನು ಹಿಡಿದು ಘೋಷ ವಾಖ್ಯಗಳನ್ನು ಕೂಗುವುದರ ಮೂಲಕ, ಕಡಿಮೆ ಮತದಾನ ವಾಗಿರುವ ವಾರ್ಡ್ಗಳಲ್ಲಿ ರಥ ಸಂಚಾರ ಹಾಗೂ ಜನರಲ್ಲಿ ಮತದಾನ ಮಾಡುವಂತೆ ಮನವಿ ಹೀಗೆ ಅತೀ ವಿಜೃಂಭಣೆಯಿಂದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು

ಮತದಾನ ಜಾಗೃತಿ ಜಾಥಾವು ಇಂಡಿ ಆಡಳಿತ ಸೌಧದಿಂದ ಪ್ರಾರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ವೃತ್ತ-ಅಂಬೇಡ್ಕರ ವೃತ್ತ-ಮಹಾವೀರ ವೃತ್ತ-ಗಾಂಧಿ ವೃತ್ತ, ಕಡಿಮೆ ಮತದಾನವಾಗಿರುವ ಶಾಂತೇಶ್ವರ ದೇವಸ್ಥಾನ ಮಾರ್ಗವಾಗಿ-ಮತದಾನ ಜಾಗೃತಿ ಜಾಥಾ ಅಭಿಯಾನ ಅಂಚೆ ಕಛೇರಿ ಮಾರ್ಗವಾಗಿ ತಾಲೂಕ ಪಂಚಾಯತಿ ಕಾರ್ಯಾಲಯದವರೆಗೆ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳಾದ ಸಿ. ಆರ್. ಮುಂಡರಗಿ, ಇಂಡಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು (ಗ್ರಾ.ಉ) ಸಂಜಯ ಖಡಗೇಕರ, ರೂಗಿ ಗ್ರಾಮ ಪಂಚಾಯತಿಯ ಬಸವರಾಜ ಬಬಲಾದ, ತಾಲೂಕು ಆಡಳಿತ ಅಧಿಕಾರಿಗಳು, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೀಲಗಂಗಾ ಬಬಲಾದ, ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿಗಳಾದ ಸಹನಾ ಕುಡಿಗನೂರ, ರಾಜೇಶ ಪವಾರ, ಜಿಲ್ಲಾ ಪಂಚಾಯತಿಯ ಸಿಬ್ಬಂದಿಯವರು, ತಾಲೂಕು ಮಟ್ಟದ ಎಲ್ಲಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯವರು, ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಸ್ವ-ಸಹಾಯ ಸಂಘದ ಮಹಿಳೆಯರು ಹಾಗೂ ಇತರರು ಉಪಸ್ಥಿತರಿದ್ದರು.

Latest Indian news

Popular Stories