ElectionBidar

ಬೀದರ್ ನಗರಸಭೆ: ಅಧಿಕಾರಕ್ಕಾಗಿ ದೋಸ್ತಿ ಅನಿವಾರ್ಯ

ಬೀದರ್: ನಿರೀಕ್ಷೆಯಂತೆ ಬೀದರ್ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಆದರೆ, ಸ್ವಂತಬಲದಲ್ಲಿ ಅಧಿಕಾರಕ್ಕೇರಬೇಕೆಂಬ ಕನಸು ಮಾತ್ರ ಹಾಗೆಯೇ ಉಳಿದೆ.
ಚುನಾವಣೆ ನಡೆದ 33 ವಾರ್ಡುಗಳ ಪೈಕಿ ಕಾಂಗ್ರೆಸ್ 15 ರಲ್ಲಿ ಗೆದ್ದಿದೆ. ಬಿಜೆಪಿ 8 ಸ್ಥಾನಗಳಲ್ಲಷ್ಟೇ ಗೆಲ್ಲಲು ಶಕ್ತವಾಗಿದೆ. ಸದ್ದಿಲ್ಲದ ಪ್ರಚಾರದ ನಂತರವೂ ಜೆಡಿಎಸ್ 7 ರಲ್ಲಿ ಗೆದ್ದಿದೆ. ಎಐಎಂಐಎA 2 ರಲ್ಲಿ ಗೆದ್ದಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿಯ ಒಬ್ಬ ಅಭ್ಯರ್ಥಿ ಗೆದ್ದಿದ್ದಾರೆ.
ನಗರಸಭೆಯ ಒಟ್ಟು 35 ವಾರ್ಡುಗಳ ಪೈಕಿ 33 ರಲ್ಲಿ ಮಾತ್ರ ಚುನಾವಣೆ ನಡೆದಿದೆ. ಕೋರ್ಟ್ ಪ್ರಕರಣದಿಂದಾಗಿ ವಾರ್ಡ್ ಸಂಖ್ಯೆ 26 ಮತ್ತು 32 ರಲ್ಲಿ ಚುನಾವಣೆ ನಡೆದಿಲ್ಲ. ಸದ್ಯದ ಫಲಿತಾಂಶದ ಪ್ರಕಾರ ಅಧಿಕಾರಕ್ಕೇರಲು ದೋಸ್ತಿ ಅನಿವಾರ್ಯವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಮಾಡಿಕೊಳ್ಳಬಹುದು. ಎಐಎಂಐಎA 2 ಮತ್ತು ಆಮ್ ಆದ್ಮಿಯ ಒಬ್ಬ ಸದಸ್ಯರ ಬೆಂಬಲ ಸಿಕ್ಕಲ್ಲಿ ಕಾಂಗ್ರೆಸ್ ಸಂಖ್ಯಾಬಲ 18 ಕ್ಕೇರಲಿದೆ. ಸದ್ಯದ ಮಟ್ಟಿಗೆ ಅಧಿಕಾರಕ್ಕೇರಲು ಅದು ಸಾಕಾಗಬಹುದು.
ಕೋವಿಡ್ ಮತ್ತಿತರ ಕಾರಣಗಳಿಂದಾಗಿ ಈ ಬಾರಿ ಪ್ರಚಾರದಲ್ಲಿ ಅಬ್ಬರ ಕಂಡು ಬಂದಿರಲಿಲ್ಲ. ಮನೆ ಭೇಟಿಯ ಮೂಲಕವೇ ಮತದಾರರ ಮನವೊಲಿಸಿಕೊಳ್ಳಲು ಅಭ್ಯರ್ಥಿಗಳು ಯತ್ನಿಸಿದ್ದರು. ಪ್ರಚಾರದ ಕೊನೆಯ ಎರಡು ದಿನಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದರಿಂದ ಕೊನೆ ಸುತ್ತಿನ ಮತದಾರರ ಭೇಟಿಗೆ ಅಷ್ಟಾಗಿ ಅವಕಾಶ ಸಿಕ್ಕಿರಲಿಲ್ಲ.
ಬೀದರ್ ನಗರಸಭೆಯಲ್ಲಿ ಕಾಂಗ್ರೆಸ್ ಬೇರು ಭದ್ರವಾಗಿವೆ. ಸಾಕಷ್ಟು ಪ್ರಯತ್ನದ ನಂತರವೂ ಇಲ್ಲಿ ಬಿಜೆಪಿ ಬೆಳೆಯುತ್ತಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರನ್ನು ನಿರ್ಲಕ್ಷಿಸಿ, ಮುಖಂಡರ ಸುತ್ತಮುತ್ತ ಓಡಾಡುವರಿಗೇ ಟಿಕೆಟ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಜೆಡಿಎಸ್ 7 ವಾರ್ಡುಗಳಲ್ಲಿ ಗೆಲ್ಲುವ ಮೂಲಕ ಇನ್ನೂ ತನ್ನ ಬೇರು ಗಟ್ಟಿಯಾಗಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಬಿಜೆಪಿಗೆ ಹೋಲಿಸಿದ್ದಲ್ಲಿ ಜೆಡಿಎಸ್ ಒಂದಿಷ್ಟು ದುರ್ಬಲ ಎಂಬ ಭಾವನೆ ಹೆಚ್ಚಿನವರಲ್ಲಿತ್ತು. ಆದರೆ, ಬಿಜೆಪಿಗೆ ಸರಿಸಮವಾದ ಸಾಧನೆಯನ್ನು ಮಾಡುವ ಮೂಲಕ ಜೆಡಿಎಸ್ ಗಮನ ಸೆಳೆದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button