ವಿಶ್ವವಿದ್ಯಾಲಯದಲ್ಲಿ ಕನ್ನಡ ಕಡ್ಡಾಯ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಬೆಂಗಳೂರು: ರಾಜ್ಯ ಸರಕಾರ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶದ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್‌ ಕೇಂದ್ರ ಸರಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.

ಈಗಾಗಲೇ 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡಿರುವುದರಿಂದ ಈ ಹಂತದಲ್ಲಿ ಸರಕಾರದ ಆದೇಶಕ್ಕೆ ತಡೆ ನೀಡುವ ಅಗತ್ಯವಿಲ್ಲವೆಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಆದರೆ, ಅರ್ಜಿದಾರರ ಪರ ವಕೀಲರು, ‘ಮಧ್ಯಂತರ ತಡೆ ನೀಡಲೇಬೇಕು. ಇಲ್ಲವಾದರೆ ಸಾಕಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ’ ಎಂಬ ಅಂಶ ಪ್ರಸ್ತಾಪಿಸಿದ್ದರಿಂದ ನ್ಯಾಯಪೀಠ ಮೊದಲು ಕೇಂದ್ರದ ನಿಲುವು ಸ್ಪಷ್ಟಪಡಿಸಲಿ ಎಂದು ಹೇಳಿ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದೆ.

ಪದವಿ ತರಗತಿಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಸಂಸ್ಕೃತ ಭಾರತಿ ಟ್ರಸ್ಟ್‌ ಸೇರಿ ಹಲವು ಸಂಸ್ಥೆಗಳು ಸಲ್ಲಿಸಿರುವ ಪಿಐಎಲ್‌ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ – ಸರಕಾರದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ‘ಪ್ರಾದೇಶಿಕ ಭಾಷೆ ಕನ್ನಡ ಪ್ರೋತ್ಸಾಹಿಸಬೇಕು ಎನ್ನುವ ಹೆಸರಲ್ಲಿ ಕನ್ನಡ ಕಡ್ಡಾಯಗೊಳಿಸುವುದು ಸರಿಯೇ? ಎನ್‌ಇಪಿ ಇದರ ಬಗ್ಗೆ ಏನು ಹೇಳುತ್ತದೆ?’ ಎಂದು ಕೇಂದ್ರ ಸರಕಾರಿ ವಕೀಲರನ್ನು ಕೇಳಿತು. ಅದಕ್ಕೆ ಕೇಂದ್ರದಿಂದ ಮಾಹಿತಿ ಪಡೆದು ನಿಲುವು ತಿಳಿಸಲು ಸ್ವಲ್ಪ ಸಮಯಾವಕಾಶ ಬೇಕು ಎಂದರು.

Latest Indian news

Popular Stories