
ಹಿರಿಯ ನಾಗರೀಕರನ್ನು ಗೌರವದಿಂದ ಕಾಣಿರಿ – ಆದಿಮನಿ ವೀರಲಕ್ಷ್ಮೀ
ರಾಯಚೂರು,ಅ.1:- ಹಿರಿಯ ನಾಗರೀಕರನ್ನು ಗೌರವಿಸುವುದು ದೇಶದ ಸಂಪ್ರದಾಯದಲ್ಲಿಯೇ ಮಿಳಿತವಾಗಿದೆ, ಆದ ಕಾರಣ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆದಿಮನಿ ವೀರಲಕ್ಷ್ಮೀ ಅವರು ಹೇಳಿದರು.
ಅವರು ಅ.1ರ ಗುರುವಾರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರದಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರೀಕರಿಗೆ ರಕ್ಷಣೆ ಮತ್ತು ಗೌರವದಿಂದ ನೋಡಿಕೊಳ್ಳದೆ ಇರುವಂತಹ ಪ್ರಕರಣಗಳು ವರದಿಯಾಗುತ್ತಿರುವುದು ಆರೋಗ್ಯಕರ ಸಮಾಜದ ಉತ್ತಮ ಲಕ್ಷಣವಲ್ಲ, ಸಮಾಜಕ್ಕೆ ಹಾಗೂ ಮನೆಗಳಿಗೆ ಹಿರಿಯ ನಾಗರೀಕರೇ ಆಸ್ತಿ, ಅವರ ಜೀವನಾನುಭವ ನಮ್ಮ ಮುಂದಿನ ಜೀವನಕ್ಕೆ ದಾರಿ ದೀಪ ಆದ ಕಾರಣ ಅವರನ್ನು ಗೌರವದಿಂದ ಕಾಣಬೇಕು ಎಂದರು.
ಕೋವಿಡ್-19 ಸೋಂಕು ಪ್ರತಿನಿತ್ಯವೂ ಹರಡುತ್ತಿರುವುದರಿಂದ ಅವರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಹೋಗಬಾರದು, ವಯೋವೃದ್ದರು ಮನೆಯಲ್ಲಿಯೇ ಇದ್ದುಕೊಂಡು ಕಾಲಕಾಲಕ್ಕೆ ಬಿಸಿನೀರು, ಕಷಾಯ ಸೇವಿಸಿ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ಜಾಗೃತಿ ವಹಿಸಬೇಕು ಎಂದರು.
ಹಿರಿಯರ ಪಾಲನೆ, ಪೋಷಣೆ ಮಕ್ಕಳ ಆದ್ಯ ಕರ್ತವ್ಯವಾಗಿದೆ, ಹಿರಿಯರನ್ನು ಮನೆಯಿಂದ ಹೊರಹಾಕದೇ ಅವರನ್ನು ಗೌರವಯುತವಾಗಿ ನೋಡಿಕೊಳ್ಳುವಂತೆ ಅವರು ಕಿವಿ ಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ದುರಗೇಶ ಅವರು ಮಾತನಾಡಿ, ಹಿರಿಯ ನಾಗರೀಕರು ದೇಶದ ಸಂಪತ್ತು, ನಮ್ಮ ಇಂದಿನ ಬೆಳವಣಿಗೆಗೆ ಅವರೇ ಕಾರಣರು, ಅವನ್ನು ಜೀವನದ ಕೊನೆಯವರೆಗೂ ಚನ್ನಾಗಿ ನೋಡಿಕೊಳ್ಳಬೇಕು, ಇತ್ತೀಚೆಗೆ ಹಿರಿಯ ಮೇಲೆ ಅಮಾನವೀಯ ಕೃತ್ಯ ಎಸಗುವ ಪ್ರಕರಣಗಳು ಸಮಾಜದಲ್ಲಿ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ, ಶಾಲಾ ಕಾಲೇಜುಗಳಲ್ಲಿ ನೈತಿಕ ಮೌಲ್ಯ ಬೆಳೆಸುವ ಕುರಿತ ಪಠ್ಯಗಳು ಆರಂಭಗೊಂಡಿವೆ ಎಂದರು.
ಹಿರಿಯ ನಾಗರೀಕರನ್ನು ಗೌರವದಿಂದ ನಡೆಸಿಕೊಳ್ಳಬೇಕು, ಸಣ್ಣಪುಟ್ಟ ಸಂಗತಿಗಳಿಗೆ ಜಗಳವಾಡಬಾರದು, ಜಿಲ್ಲೆಯಲ್ಲಿ 48 ಸಾವಿರಕ್ಕೂ ಹೆಚ್ಚು ಮಂದಿಗೆ ವೃದ್ದಾಪ್ಯ ವೇತನ ನೀಡಲಾಗುತ್ತಿದೆ, ಪ್ರತಿ ಕಂದಾಯ ವಿಭಾಗಗಳಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅಲ್ಲಿ ಪಿಂಚಣಿ ಬಾರದವರು ಅರ್ಜಿ ಸಲ್ಲಿಸಬಹುದಾಗಿದೆ, ಅದರೊಂದಿಗೆ ನಗರದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಯೂ ಪ್ರತ್ಯೇಕ ವಿಭಾಗವೊಂದನ್ನು ಆರಂಭಿಸಲಾಗಿದೆ, ಅಧಿಕಾರಿಯನ್ನು ನಿಯೋಜಿಸಲಾಗಿದೆ, ಅವರನ್ನು ಸಂಪರ್ಕಿಸಿದರೆ ಕೂಡಲೇ ವೃದ್ದಾಪ್ಯ ವೇತನ ದೊರೆಯಲಿದೆ, ಜಿಲ್ಲೆಯಲ್ಲಿರುವ ಹಿರಿಯ ನಾಗರೀಕರ ಸಹಾಯವಾಣಿ ದೂರವಾಣಿ ಕರೆ ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ, ಹಿರಿಯ ನಾಗರೀಕರ ಸಂರಕ್ಷಣಾ ಕಾಯ್ದೆಯಡಿ ದೂರು ಸಲ್ಲಿಸಿದರೆ ಅವರ ಮಕ್ಕಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ,
ಕರಿಯಪ್ಪ ಮಾಸ್ತರ್ ಇತರರು ಇದ್ದರು.




