
ರಕ್ತದಾನ ಶಿಬಿರ ಸಂಘಟನೆಗೆ ಅಗತ್ಯ ನೆರವು – ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್
ರಾಯಚೂರು,ಅ.1:- ರಕ್ತದಾನ ಶಿಬಿರಗಳನ್ನು ಸಂಘಟಿಸುವವರಿಗೆ ಸರ್ಕಾರದಿಂದ ಅಗತ್ಯ ನೆರವು ನೀಡುವ ಯತ್ನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದರು.
ಅವರು ಅ.1ರ ಗುರುವಾರ ನಗರದ ಜೆ.ಸಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳು, ರೆಡ್ಕ್ರಾಸ್ ಸಂಸ್ಥೆ ಹಾಗೂ ಓಂ ಸಾಯಿ ಧ್ಯಾನ ಮಂದಿರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಾನವೀಯ ದೃಷ್ಟಿಯಿಂದ ರಕ್ತದಾನ ಅತ್ಯಂತ ಉಪಯುಕ್ತವಾದದ್ದು. ಅದನ್ನು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು, ಸಂಘಟನೆಗಳು ಹಮ್ಮಿಕೊಳ್ಳುತ್ತವೆ, ಅವರಿಗೆ ಸರ್ಕಾರದಿಂದ ಅಗತ್ಯ ವೆರವು ನೀಡಲು ಕ್ರಮವಹಿಸಲಾಗುವುದು.
ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಬೇಕು, ಮುಖ್ಯವಾಗಿ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಹೆಚ್ಚಾಗಬೇಕು, ರಕ್ತದಾನಗಳು ಹೆಚ್ಚಾದಲ್ಲಿ ಮಾನವ ಹಾನಿಯನ್ನು ತಪ್ಪಿಸಬಹುದಾಗಿದೆ, ದೇಶದಲ್ಲಿ ಕೋವಿಡ್-19 ಗಿಂತಲೂ, ಸೂಕ್ತ ಸಮಯಕ್ಕೆ ರಕ್ತ ದೊರೆಯದೇ ವಿವಿಧ ರೀತಿಯ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಿದೆ, ಕೋವಿಡ್-19 ಸೋಂಕು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಗತ್ಯ, ಈ ಸೋಂಕಿನಿಂದ ಸಾವೀಗೀಡಾಗುತ್ತಿರುವವರ ಪ್ರಮಾಣ ವಿಶ್ವದಲ್ಲಿಯೇ ಅತಿ ಕಡಿಮೆಯದ್ದಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರ ಬಾಬು, ಡಾ.ವಿಜಯ ಶಂಕರ್, ಡಾ.ವೆಂಕಟೇಶ ನಾಯಕ, ಡಾ.ಅಹ್ಮದ್ ಹುಸೇನ್ ಇತರರು ಇದ್ದರು.
ರೆಡ್ಕ್ರಾಸ್ ಸಂಸ್ಥೆಯ ದಂಡಪ್ಪ ಬೀರಾದರ ನಿರೂಪಿಸಿದರು.
ಭಾರತ ಸೇವಾದಳದ ವಿದ್ಯಾಸಾಗರ ಚಿಮಣಿಗೇರಿ ವಂದಿಸಿದರು.
ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು.




