
BidarState News
ಡಾ.ಬಸವಲಿಂಗ ಪಟ್ಟದೇವರಿಗೆ ನಾಡೋಜಾ ಪ್ರಶಸ್ತಿ: ಶಾಸಕ ಪ್ರಭು ಚವ್ಹಾಣ ಹರ್ಷ
ಬೀದರ್ : ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದೇವರು ಹಂಪಿ ವಿಶ್ವವಿದ್ಯಾಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಹರ್ಷ ವ್ಯಕ್ತಪಡಿಸಿದ್ದಾರೆ.
ಪೂಜ್ಯರು ಗಡಿನಾಡಿನಲ್ಲಿದ್ದುಕೊಂಡು ಧಾರ್ಮಿಕ ಸೇವೆಯ ಜೊತೆಗೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿಯೂ ಬಸವ ತತ್ವದ ಪ್ರಚಾರ ಪ್ರಸಾರ ಮಾಡುತ್ತಿದ್ದು, ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆ ಆದರ್ಶವಾದದ್ದು, ಅನಾಥ ಮಕ್ಕಳ ಪಾಲಿನ ದೇವರಾಗಿರುವ ಪೂಜ್ಯರು ಸಾಕಷ್ಟು ಬಡ, ನಿರ್ಗತಿಕ ಮಕ್ಕಳನ್ನು ಬೆಳೆಸಿ, ಉತ್ತಮ ಶಿಕ್ಷಣ ನೀಡುತ್ತಾ ಬರುತ್ತಿದ್ದಾರೆ. ಶ್ರೀಗಳು ನಾಡೋಜ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಭಕ್ತಾದಿಗಳು ಮತ್ತು ಬಸವಾನುಯಾಯಿಗಳಿಗೆ ಎಲ್ಲಿಲ್ಲದ ಸಂತೋಷ ತಂದಿದೆ ಎಂದಿದ್ದಾರೆ.




