ದಾವಣಗೆರೆಯಲ್ಲಿ ಭೀಕರ ಅಪಘಾತ: ಟೈರ್ ಸ್ಫೋಟಗೊಂಡು ಬೋಲೆರೋ ವಾಹನ ಪಲ್ಟಿ, ಮೂವರು ಮೃತ್ಯು

ದಾವಣಗೆರೆ: ಟೈರ್ ಸ್ಫೋಟಗೊಂಡು ಬೋಲೆರೋ ವಾಹನ ಪಲ್ಟಿಯಾದ ಪರಿಣಾಮ ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ದಾವಣಗೆರೆ ಹೊರವಲಯದ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಮೃತಪಟ್ಟವರೆಲ್ಲರೂ ಆಂಧ್ರ ಮೂಲದವರಾಗಿದ್ದಾರೆಂದು ಹೇಳಲಾಗುತ್ತಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಹುಬ್ಬಳ್ಳಿಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮೃತಪಟ್ಟವರು ಆಂಧ್ರ ಮೂಲದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಸಿಂಗರಾಜನಹಳ್ಳಿ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಹಾವೇರಿ ಜಿಲ್ಲೆ ಬ್ಯಾಡಿಗೆಯಿಂದ ಮೆಣಸಿನಕಾಯಿ ಖರೀದಿಗೆ ತೆರಳಿ ವಾಪಸ್ ಬರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಬೈಕ್​ ವ್ಹೀಲಿಂಗ್ ಹುಚ್ಚಾಟಕ್ಕೆ ಓರ್ವ ಯುವಕ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಟೋಲ್ ಬಳಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮೃತ ಯುವಕನನ್ನು ದಾಸರಹಳ್ಳಿಯ ರಾಜೀಶ್(18) ಎಂದು ಗುರ್ತಿಸಲಾಗಿದೆ. ವ್ಹೀಲಿಂಗ್ ಬೈಕ್ ನಲ್ಲಿದ್ದ ಮತ್ತೊಬ್ಬ ಸೊಹೈಲ್ ಗೆ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಬೈಕ್​ನ ಕೆಂಪರಾಜು, ತರುಣ್​ಗೂ ಚಿಕಿತ್ಸೆ ನೀಡಲಾಗುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories