ಬಿಜೆಪಿ ಸೇರಿದ ಬಳಿಕ ಭ್ರಷ್ಟಾಚಾರಿಗಳು ಪರಿಶುದ್ಧರಾಗಲು ಅದೇನು ವಾಶಿಂಗ್ ಮಶೀನಾ?: ಕಾಂಗ್ರೆಸ್ ಮುಖಂಡ ‌ ರಮಾನಾಥ ರೈ ಪ್ರಶ್ನೆ

ಕಾರವಾರ : ಕಾಂಗ್ರೆಸ್‌ನಲ್ಲಿದ್ದ ಭ್ರಷ್ಟಾಚಾರಿಗಳು ಬಿಜೆಪಿ ಸೇರಿದ ಮೇಲೆ ಹೇಗೆ ಒಳ್ಳೆಯ ಜನರಾಗುತ್ತಾರೆ ? ಬಿಜೆಪಿ ಪಕ್ಷ ಏನು ವಾಶಿಂಗ್ ಮಶೀನಾ ? ಆ ಪಕ್ಷ ಸೇರಿದ ಮೇಲೆ ಪರಿಶುದ್ಧ ಆಗಲಿಕ್ಕೆ? ನಾಚಿಯಾಗಬೇಕು ಇವರಿಗೆ ಎಂದು ಮಾಜಿ ಸಚಿವ ರಮಾನಾಥ ರೈ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಾರವಾರದ ಪತ್ರಿಕಾಗೋಷ್ಠಿಯಲ್ಲಿ ರವಿವಾರ ಮಾತನಾಡಿದ ಅವರು, ಮೀನು ತಿನ್ನುವವರ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಕರಿಮಣಿ ಸರ ಉಳಿಯಲ್ಲ ಎನ್ನುತ್ತಾರೆ. ಇವೆಲ್ಲ ಪ್ರಧಾನಿಗಳು ಮಾತನಾಡುವ ವಿಷಯವೇ? ಅವರು ಹೇಳುವುದರಲ್ಲಿ ಅಸಲಿಯತ್ತಿಲ್ಲ.‌ ಮತಕ್ಕಾಗಿ ಸಂದರ್ಭಕ್ಕನುಸಾರವಾಗಿ ಮಾತನಾಡುತ್ತಾರೆ‌. ಸರ್ಕಾರ ಬಂದ ಐದು ತಿಂಗಳಲ್ಲಿ ಕಪ್ಪು ಹಣ ತರುತ್ತೇವೆಂದಿದ್ದರು.

ಐದು ತಿಂಗಳಲ್ಲಿ ಕಪ್ಪು ಹಣ ಬಂದಿದೆಯಾ? ಹತ್ತು ವರ್ಷ ಅಧಿಕಾರ ಮಾಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಕಪ್ಪು ಹಣ ಚುನಾವಣಾ ಬಾಂಡ್ ‌ಮೂಲಕ ದುಪ್ಪಟ್ಟಾಗಿದೆ. ಹಸಿವಿನ ವಿಷಯ ಬಂದಾಗ ಅದನ್ನು ಬದಿಗೆ ಸರಿಸಿ, ಭಾವನಾತ್ಮಕವಾಗಿ ದೇವರು ,ಧರ್ಮದ ವಿಷಯ ಮಾತನಾಡುತ್ತಾರೆ. 17 ಲಕ್ಷ ಕೋಟಿ ಬಂಡವಾಳಶಾಹಿ ಸ್ನೇಹಿತರಾದ ಅದಾನಿ,ಅಂಬಾ‌ಇ ಸಾಲ ಮನ್ನಾ ಮಾಡುವ ಅವರಿಗೆ ರೈತರ ಸಾಲ ಮನ್ನಾ ಮಾಡಲು ಆಗಲ್ಲ. ಇದನ್ನು ‌ನೀವು ಮಾಹಿತಿ ಹಕ್ಕಿನಲ್ಲಿ ಸಹ ಕೇಳಿ ಸತ್ಯ ತಿಳಿಯಬಹುದು‌ ಎಂದರು.

ಬಿಜೆಪಿಯ ಸಣ್ಣಪುಟ್ಟ ಪುಡಾರಿಗಳು ಕಾಂಗ್ರೆಸ್ ಮಾಡಿದ್ದ ಸಾಲವನ್ನ ತುಂಬುತ್ತಿದ್ದೇವೆನ್ನುತ್ತಾರೆ. ಬಿಜೆಪಿ ಸರ್ಕಾರದ ಹತ್ತು ವರ್ಷದಲ್ಲಿ ಸಾಲ 174 ಲಕ್ಷ ಕೋಟಿ ರೂ. ಆಗಿದೆ, ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಸಾಲ ನಾಲ್ಕು ಪಟ್ಟು ಹೆಚ್ಚಿದೆ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಬಂದ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಭವಾಗಿ ಹತ್ತು ವರ್ಷ ಕಳೆದರೂ ಪೂರ್ಣಗೊಳಿಸಲು ಇವರಿಗೆ ಆಗಿಲ್ಲ. ಆಧಾರ್ ಕಾರ್ಡ್ ಜಾರಿಗೆ ತರಬೇಕೆಂದು ಕಾಂಗ್ರೆಸ್ ಪ್ರಸ್ತಾಪಿಸಿದಾಗ ವಿರೋಧ ಮಾಡಿದ್ದ ಬಿಜೆಪಿಯವರು ಈಗ ಅದನ್ನೇ ಎಲ್ಲದಕ್ಕೂ ಕಡ್ಡಾಯವಾಗಿ ಮಾಡಿದ್ದಾರೆ. ಜಿಎಸ್ಟಿಯನ್ನ ವೈಜ್ಞಾನಿಕವಾಗಿ ಜಾರಿಗೆ ತರದೆ ಸಣ್ಣಪುಟ್ಟ ವಸ್ತುಗಳ ಮೇಲೂ ತೆರಿಗೆ ವಿಧಿಸಿದ್ದಾರೆ.. ಜಿಎಸ್ಟಿ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ನಮ್ಮ ಪಾಲು ನಮಗೆ ಕೊಡುತ್ತಿಲ್ಲ.‌ ಪ್ರಕೃತಿ ವಿಕೋಪದ ಪರಿಹಾರದಲ್ಲೂ ಸತಾಯಿಸುತ್ತಾರೆ. ಇದು ಒಕ್ಕೂಟ ವ್ಯವಸ್ಥೆಗೆ ಶೋಭೆ ತರುವುದಿಲ್ಲ. ಈ ಹಿಂದೆ ಇದ್ದ ರಾಷ್ಟ್ರೀಯ ಮೀನುಗಾರಿಕಾ‌ ಮಂಡಳಿಯಿಂದ ಕೆಲವು ತಾಲೂಕುಗಳಲ್ಲಿ ಮೀನುಮಾರುಕಟ್ಟೆ ಮಾಡಿದ್ದೆವು. ಈಗ ಆ ಬೋರ್ಡ್ ಇದೆಯಾ ಇಲ್ಲವಾ ಗೊತ್ತಾಗುತ್ತಿಲ್ಲ. ಇಲೆಕ್ಷನ್ ಬಾಂಡ್ ಮೂಲಕ ಬಿಜೆಪಿ ಅಧಿಕೃತ ಭ್ರಷ್ಟಾಚಾರ ನಡೆಸಿದೆ. ನಾವು ಈ ಬಾಂಡ್‌ನ ವಿರೋಧ ಮಾಡಿದ್ದೆವು‌. ಇಡಿ ದಾಳಿ ಮಾಡಿಸುತ್ತೇವೆಂದು ಬೆದರಿಸಿ ಬಾಂಡ್ ಮೂಲಕ ಹಣ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸನ ಮಾಜಿ ಸಚಿವ‌ ರಮಾನಾಥ ರೈ ಟೀಕಿಸಿದರು.

ರಾಜೀವ್ ಗಾಂಧಿ ಪಕ್ಷಾಂತರ ಮಸೂದೆ ತಂದಿದ್ದರು. ಅದನ್ನ ದುರ್ಬಲಗೊಳಿಸಿದ್ದು ಬಿಜೆಪಿ. ಆಪರೇಷನ್ ಕಮಲ ನಡೆಸಿ ಪ್ರಜಾಪ್ರಭುತ್ವಕ್ಕೆ ಕಳಂಕ ತಂದರು. ದೇಶದಲ್ಲಿ ವಿವಿಧ ರಾಜ್ಯಗಳ 400 ಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದರು‌. ಕಾಂಗ್ರೆಸ್ ಸರ್ಕಾರಗಳನ್ನು ಬೀಳಿಸಿದರು. ಕೇಂದ್ರ ಸರ್ಕಾರದ್ದು ಗೋವಾದಲ್ಲಿ ಒಂದು, ಉತ್ತರಕನ್ನಡದಲ್ಲಿ ಒಂದು ರೀತಿಯ ನಿಯಮ. ದಿನಬಳಕೆಯ ವಸ್ತುಗಳ ದರ‌ ಗಗನಕ್ಕೇರಿದೆ. ಡೀಸೆಲ್, ಪೆಟ್ರೋಲ್ ದರ ಕಡಿಮೆಯಾದರೆ ಸಹಜವಾಗಿ ವಸ್ತುಗಳ ಬೆಲೆ ಇಳಿಯುತ್ತದೆ. ಆದರೆ ಇವರು ಇಂಧನಗಳ ಅಬಕಾರಿ ಸುಂಕ ಹೆಚ್ಚು ಮಾಡಿದ್ದಾರೆ. ಕ್ರೂಡ್ ಆಯಿಲ್‌ ದರ ಹೆಚ್ಚಿದ್ದಾಗಲೂ ಪೆಟ್ರೋಲ್‌ನ್ನು ನಾವು ಕಡಿಮೆಯಲ್ಲಿ ಕೊಟ್ಟಿದ್ದೆವು.‌ ಆದರೆ ಈಗ ಎಲ್ಲವನ್ನೂ ವ್ಯಾಪಾರ ದೃಷ್ಟಿಯಲ್ಲಿ ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ರೈ ಟೀಕಿಸಿದರು.

ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಲ್ಲಿ ಶೇ. 10 ಕೂಡ ಈಡೇರಿಸಿಲ್ಲ.‌ ಕಾಂಗ್ರೆಸ್ ಶೇ. 90 ಈಡೇರಿಸಿದೆ. ಬೇಕಿದ್ದರೆ ಮಾಹಿತಿ ಹಕ್ಕಿನಲ್ಲಿ ಕೇಳಬಹುದು. ಜನರನ್ನ ಋಣಮುಕ್ತ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜನರ ಜೀವನ ಸುಧಾರಿಸಿದೆ. ಇಂದಿರಾ ಗಾಂಧಿ 20 ಅಂಶಗಳ ಕಾರ್ಯಕ್ರಮದಿಂದ ಬಡಜನರ ಆರ್ಥಿಕತೆ ಸುಧಾರಣೆಯಾಗಿದೆ.‌ ಇಂದಿರಾ ಗಾಂಧಿ, ರಾಜೀವ್ಬಗಾಂಧಿ, ಮಹಾತ್ಮ ಗಾಂಧಿಯವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಈಗ ಅವರ ಬಗ್ಗೆಯೂ ಟೀಕೆ ಮಾಡುತ್ತಾರೆ. ಮೀಸಲಾತಿ‌ ಮೇಲೆ ವಿಶ್ವಾಸವಿಲ್ಲ ಎಂದು ಇದೇ ಪ್ರಧಾನಿ ಹೇಳಿದ್ದಿದೆ ಎಂದು ರೈ ನುಡಿದರು.
ಈ ಬಾರಿ ಕಾಂಗ್ರೆಸ್ ಗೆ‌ ಮತ ಹಾಕಬೇಕು‌. ಕಾಂಗ್ರೆಸ್ ಬಡವರಿಗೆ ಅನ್ಯಾಯ ಮಾಡಿಲ್ಲ .‌ ಭೂಮಾಲಿಕರಿಗೆ ತೊಂದರೆಯಾಗಿದೆ, ಬಂಡವಾಳಶಾಹಿ, ಶ್ರೀಮಂತರಿಗೆ ತೊಂದರೆಯಾಗಿದೆ. ನಾನೂ ಜಮಿನ್ದಾರ ಕುಟುಂಬದವನು.‌ ನನ್ನೊಬ್ಬನ ಜಮೀನು ಹೋಗಿರಬಹುದು. ಆದರೆ ನೂರು ಜನ ಬಡವರುಗೆ ಸಹಾಯವಾಗಿದೆ. ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದು ಇಂದಿರಾಗಾಂಧಿ. ಆಹಾರ ಭದ್ರತಾ ಕಾಯ್ದೆಯಿಂದ ಜನರ ಬದುಕನ್ನ ಹಸನುಗೊಳಿಸಿದ್ದು ಮನಮೋಹನ್ ಸಿಂಗ್ ಸರ್ಕಾರ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದಾಗ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು. ಬಿಜೆಪಿ ಬಂದ ಮೇಲೆ ಅದನ್ನ ಐದು ಕೆಜಿಗೆ ಇಳಿಸಿದರು.‌ ಆದರೆ ಈ ಬಾರಿ ಐದು ಕೆಜಿಯ ಜೊತೆಗೆ ಇನ್ನೈದು ಕೆಜಿ ಕೊಡಬೇಕೆಂದುಕೊಂಡೆವು. ಆಹಾರ ಕಾಯ್ದೆಯಲ್ಲಿ ಅಕ್ಕಿ ಕೇಳಿದಾಗ ಕೊಡಬೇಕೆಂಬ ನಿಯಮವಿದ್ದರೂ ಗ್ಯಾರಂಟಿ ಯೋಜನೆ ಯಶಸ್ವಿಯಾಗಬಾರದೆಂದು ಅಕ್ಕಿ ಕೊಟ್ಟಿಲ್ಲ. ಸರ್ವಶಿಕ್ಷಾ ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಶಿಕ್ಷಣ, ಮಾಹಿತಿ ಹಕ್ಕು ಕಾರ್ಯಕ್ರಮಗಳನ್ನ ಮಾಡಿದ್ದು ಕಾಂಗ್ರೆಸ್. ಇದನ್ನ ಬಹಳ‌ ಹೆಮ್ಮೆಯಿಂದ ಹೇಳುತ್ತೇವೆ. ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮೀಣ ಭಾಗದ ನೀರಿನ ಸಮಸ್ಯೆ ಪರಿಹರಿಸಿದ್ದೇವೆ. ಗ್ರಾಮ ಪಂಚಾಯತ್‌ಗಳು ಮೊದಲು ನಾಮಕಾವಸ್ಥೆಗಿತ್ತು.‌ ವಿಕೇಂದ್ರಿಕರಣ ಪರಿಕಲ್ಪನೆಯಲ್ಲಿ ಪಂಚಾಯತರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಗ್ರಾಮ ಪಂಚಾಯತಿಗಳಿಗೂ ಅನುದಾನ ಬರುವಂತೆ ಮಾಡಿದ್ದು ಕಾಂಗ್ರೆಸ್ ಎಂದರು.

ಪ್ರಧಾನಿ ಅಭ್ಯರ್ಥಿ ಯಾರೆಂದೇ ನಿರ್ಧರಿಸುವಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆಯೆಂಬ ಆರೋಪ ಬಿಜೆಪಿಯವರು ಮಾಡುತ್ತಿದ್ದಾರೆಂಬ ಪತ್ರಕರ್ತರ‌ ಪ್ರಶ್ನೆಗೆ, ಇವರು ಕೂಡ ‘ಭವ್ಯ ಮೈತ್ರಿ’ ಮಾಡಿದ್ದಾಗಲೂ ಯಾರೂ ಪ್ರಧಾನಿ ಅಭ್ಯರ್ಥಿ ಇರಲಿಲ್ಲ. ಚುನಾವಣೆಯಾಗಲಿ, ಅಭ್ಯರ್ಥಿಯನ್ನ ಮುಂದೆ ನೋಡೋಣ. ಅಧಿಕಾರಕ್ಕಾಗಿ ಎಲ್ಲರೂ ಹೋರಾಟ ಮಾಡುತ್ತಾರೆ. ಇಂದಿರಾಗಾಂಧಿಯವರ ಭಾಷಣ, ಈಗಿನ ಪ್ರಧಾನಿ ಭಾಷಣ ತುಲನೆ ಮಾಡಿ. ಮೋದಿ ಭಾಷಣ ಕೇಳಿದರೆ ಇವರ ಬಗ್ಗೆ ನಾಚಿಕೆಯಾಗುತ್ತದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಲು ಅವಕಾಶವಿದೆ. ಮೋದಿ ಯಾಕೆ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದಾರೆ? ಅದನ್ನ ನಾವು ಪ್ರಶ್ನೆ ಮಾಡಬಾರದು. ಸುಳ್ಳು ಹೇಳಿ ಯಾಮಾರಿಸುವವರು ಅವರು. ಒಂದು‌ ಸುಳ್ಳು ಹೇಳಿ ಒಮ್ಮೆ ಮೋಸ ಮಾಡಬಹುದು, ಪ್ರತಿ ಬಾರಿನೂ ಸುಳ್ಳು ಹೇಳಿ ಜನರನ್ನ ನಂಬಿಸಲು ಆಗಲ್ಲ ಎಂದರು.

ಅಂಜಲಿ ಗೆಲ್ಲಿಸಲು ಮನವಿ :

ಕ್ಷೇತ್ರದ ಕಾವಲುಗಾರರಾಗಿ ಡಾ.ಅಂಜಲಿ ಕೆಲಸ ಮಾಡುತ್ತಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ವೈದ್ಯರಾಗಿ, ಶಾಸಕರಾಗಿ ಕೆಲಸ ಮಾಡಿದ ಅನುಭವವಿದೆ. ಅವರು ಈ ಕ್ಷೇತ್ರದ ಕಾವಲುಗಾರರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ರಮಾನಾಥ ರೈ ಮನವಿ ಮಾಡಿದರು.

ಬಿಜೆಪಿಗರು ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಆರು ಜನ ಮಹಿಳೆಯರಿಗೆ ಲೋಕಸಭಾ ಸ್ಪರ್ಧೆಗೆ ಅವಕಾಶ ಕೊಟ್ಟಿದ್ದು ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರನ್ನೇ ಆಧಾರವಾಗಿಟ್ಟುಕೊಂಡು ಮಾಡಿದ್ದು ಎಂದರು. ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಹಲವೆಡೆ ಪ್ರಚಾರದಲ್ಲಿ ತೊಡಗಿಕೊಂಡಿದ್ದೆ. ೩೦ ವರ್ಷಗಳಿಂದ ಈ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸದರೆ ಆಯ್ಕೆಯಾಗುತ್ತಿದ್ದರು. ವರ್ತಮಾನ ಸಂದರ್ಭದ ಈ ಚುನಾವಣೆಯನ್ನ ಅವಲೋಕನ ಮಾಡುವಾಗ ಇದು ಬಹಳ ಮಹತ್ವದ ಚುನಾವಣೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭಾರತದಲ್ಲಿ ಯಾವುದೇ ನೆಲೆ‌ ಕಾಣದ ಸಂದರ್ಭದಲ್ಲಿ ಕರ್ನಾಟಕದಲ್ಲಿ ನೆಲೆ ಕಂಡಿದ್ದರು. ಬಿಜೆಪಿಗೆ ಈ ಬಾರಿ ದಕ್ಷಿಣ ಭಾರತದಲ್ಲಿ ಎಲ್ಲೂ ಅವಕಾಶಗಳಿಲ್ಲ. ಚುನಾವಣೆ ಎಂದರೆ ಬಿಜೆಪಿ ಗೆಲ್ಲಬಹುದು ಎನ್ನುತ್ತಿದ್ದರು. ಈ ಬಾರಿ ಕಾಂಗ್ರೆಸ್ ಗೆ ಅವಕಾಶ ಇದೆ ಎಂಬುದು ಕೇಳಿಬರುತ್ತಿದೆ ಎಂದರು.‌

ಗ್ಯಾರಂಟಿ ಕಾರ್ಡನ್ನು ಕಳೆದ ಬಾರಿ ಬೋಗಸ್ ಕಾರ್ಡ್ ಎಂದು ಟೀಕಿಸಿದ್ದರು. ಆದರೆ ಅಧಿಕಾರಕ್ಕೆ ಬಂದಾಗ ಅದನ್ನ ಅನುಷ್ಠಾನ ಮಾಡಿ ನುಡಿದಂತೆ ನಡೆದ ಸರ್ಕಾರವೆಂಬ ಹೆಗ್ಗಳಿಕೆಗೆ ಕಾಂಗ್ರೆಸ್ ಪಾತ್ರವಾಗಿದೆ. ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಉತ್ತಮ ಕೆಲಸ ಮಾಡಿದ್ದರು. ಸೋನಿಯಾ ಗಾಂಧಿಯವರಿಗೂ ಪ್ರಧಾನಿಯಾಗಲು ಒತ್ತಾಯ ಕೇಳಿಬಂದಾಗ ತ್ಯಾಗಮಯಿಯಗಿ ತಾವು ಪ್ರಧಾನಿಯಾಗಲ್ಲ ಎಂದು ನಯವಾಗಿ ತಳ್ಳಿ ಹಾಕಿದರು. ಉತ್ತಮ ಆರ್ಥಿಕ‌ ತಜ್ಞನಿಗೆ ಅಧಿಕಾರ ನೀಡಿದರು. ಜಗತ್ತಿನಲ್ಲೇ ಆರ್ಥಿಕ ವ್ಯವಸ್ಥೆ ಕುಸಿದಾಗ ಭಾರತ ಗಟ್ಟಿಯಾಗಿತ್ತು ಎಂದರು.‌

ಪಂಚಾಯತ್‌ಗಳಲ್ಲಿ ಕೆಲಸ ಆಗುತ್ತಿದೆ ಎಂದರೆ ಅದು ಉದ್ಯೋಗ ಖಾತರಿಯಿಂದ. ಕೆಲಸಕ್ಕೆ ಸಂಭಾವನೆ ಗ್ಯಾರಂಟಿ ಕಾಂಗ್ರೆಸ್ ನೀಡಿದ್ದು. ೭೨ ಲಕ್ಷ ಕೋಟಿ ಸಾಲವನ್ನ ಮನಮೋಹನ್ ಸಿಂಗ್ ಸರ್ಕಾರ ಮನ್ನಾ ಮಾಡಿತ್ತು. ಈಗಿನ ಸರ್ಕಾರ ರೈತರ ಸಾಲ ಮನ್ನಾ ಮಾಡಲ್ಲ, ಉದ್ಯಮಿಗಳದ್ದಾದರೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಂಭು ಶೆಟ್ಟಿ ‌, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಸಾಹಿರಾ ಶೆಹಜಾದ್ ,ಸಾಹಿಲ್ ಖಾನ್‌,ರಾಣೆ ಇದ್ದರು.

Latest Indian news

Popular Stories