ಕೊಡಗು: ವಿರಾಜಪೇಟೆ ಗಾಂಧಿನಗರದ ಕೃಷಿ ಇಲಾಖೆಯ ಮುಂಭಾಗ ತ್ರಿವೇಣಿ ಶಾಲೆಯ ವಾಹನ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಬಸ್ ಚಾಲಕ ಅನಾರೋಗ್ಯದಿಂದ ದಿಡೀರನೆ ಕುಸಿದು ಬಿದ್ದ ಪರಿಣಾಮ ನೇರವಾಗಿ ಟ್ರ್ಯಾಕ್ಟರ್ ಹಾಗೂ ಎರ್ಟಿಗಾ ಕಾರಿಗೆ ಡಿಕ್ಕಿ ಹೊಡೆದು ಕಾರನ್ನು 80 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ರವಾನಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲು ಆಂಬುಲೆನ್ಸ್ ಗೆ ಬೇಡಿಕೆ ಇಟ್ಟಾಗ ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಒಂದೇ ಒಂದು ಆಂಬುಲೆನ್ಸ್ ಇಲ್ಲದಿರುವುದು ಗೋಚರಿಸಿದೆ.
ತಾಲ್ಲೂಕು ಆಸ್ಪತ್ರೆ ನಿರ್ಲಕ್ಷ್ಯ: ತುರ್ತು ವಾಹನದ ಸೇವೆ ಅಲಭ್ಯ ಸಾರ್ವಜನಿಕರ ಅಸಮಧಾನ
ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಇದ್ದು ಕಳೆದ ಎರಡು ತಿಂಗಳ ಹಿಂದೆ ಬಿಟ್ಟಂಗಾಲದಲ್ಲಿ ನಡೆದ ಅಪಘಾತದಲ್ಲಿ ಆಂಬುಲೆನ್ಸ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅದನ್ನು ಇಲ್ಲಿ ತನಕ ತಾಲೂಕು ಆಸ್ಪತ್ರೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ. ಮತ್ತೊಂದು ಆಂಬುಲೆನ್ಸ್ ಅನ್ನು ದುರಸ್ತಿಗಾಗಿ ಶೋರೂಮ್ ಗೆ ಬಿಟ್ಟು ಕೆಲವು ತಿಂಗಳುಗಳೇ ಕಳೆದರೂ ಇನ್ನು ದುರಸ್ತಿ ಪಡಿಸಿ ಪಡೆದುಕೊಂಡಿಲ್ಲ. ಈ ಬಗ್ಗೆ ಖುದ್ದು ಮಾಹಿತಿ ಪಡೆದುಕೊಂಡ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಪಿ.ಎ ಮಂಜುನಾಥ್ ಅವರು ತಾಲೂಕು ಆಸ್ಪತ್ರೆಯ ಅವ್ಯವಸ್ಥೆಯ ಬಗೆ ಖಂಡಿಸಿ ಹೇಳಿಕೆ ನೀಡಿದ್ದಾರೆ. ಕೂಡಲೇ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಆಂಬುಲೆನ್ಸ್ ಸೌಕರ್ಯವನ್ನು ಕಲ್ಪಿಸುವಂತೆ ಅವರು ಒತ್ತಾಯಿಸಿದ್ದಾರೆ.