ಬಾಗಲಕೋಟೆ: ಯಾರೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ, ಆದರೆ ಬೇರೆಯವರನ್ನು ಪಕ್ಷಕ್ಕೆ ಕರೆ ತರುವಾಗ ಸ್ಥಳೀಯ ಮುಖಂಡರ ಅಭಿಪ್ರಾಯ ಮುಖ್ಯ ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷಾಂತರ ಸಹಜ ಪ್ರಕ್ರಿಯೆಯಾಗಿದ್ದು, ಇದಕ್ಕೆ ವಿಶೇಷತೆ ಕಲ್ಪಿಸುವ ಅಗತ್ಯವಿಲ್ಲ. ರಾಜಕಾರಣ ನಿಂತ ನೀರಲ್ಲ, ರಾಜಕೀಯ ಮುಖಂಡರು ತಮ್ಮ ಭವಿಷ್ಯ ಕಂಡುಕೊಳ್ಳಲು ಪಕ್ಷಾಂತರ ಚಿಂತನೆ ಮಾಡುತ್ತಾರೆ. ಲೋಕಸಭಾ ಚುನಾವಣೆಗಳು ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶ ಸದ್ಯದ ಪಕ್ಷಾಂತರ ಪ್ರಕ್ರಿಯೆ ಹಿಂದೆ ಇದೆ. ಮೊದಲು ನಮ್ಮವರನ್ನು ಉಳಿಸಿಕೊಂಡು, ಬೇರೆಯವರನ್ನು ಕರೆತರಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿನ ಸಾಹಿತಿಗಳಿಗೆ ಬೆದರಿಕೆ ಹಾಕುವ ಪ್ರಸಂಗ ಆತಂಕದ ಸಂಗತಿ, ಇದೊಂದು ಹತ್ಯೆಯ ಸಂಚಾಗಿದೆ. ಈಗಾಗಲೇ ಗೃಹ ಸಚಿವರು ಸೂಕ್ತ ಭದ್ರತೆ ಕಲ್ಪಿಸುವ ಕುರಿತು ಮಾತನಾಡಿದ್ದಾರೆ. ಇಂತಹ ಪ್ರಸಂಗಗಳು ನಡೆಯಬಾರದು ಎಂದ ಅವರು ಸೈದ್ಧಾಂತಿಕ ಸಂಘರ್ಷಗಳು ಇದಕ್ಕೆ ಕಾರಣಗಳಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಸಹಕಾರಿ ಆಂದೋಲನ ಉತ್ತಮವಾಗಿ ನಡೆಯುತ್ತಿದೆ ಎಂದು ಸಹಕಾರಿ ಸಚಿವರು ರಾಜ್ಯದಲ್ಲಿನ ಪಿಕಾರ್ಡ್ ಬ್ಯಾಂಕ್ ಗಳನ್ನು ಸಜ್ಜುಗೊಳಿಸುವ ಕೆಲಸ ನಡೆಯಲಿದೆ ಎಂದು ಎಂದರು.