ಬೆಳಗಾವಿಯಲ್ಲಿ ಕಾಂಗ್ರೆಸ್ ಬಿರುಸಿನ ಪ್ರಚಾರ

ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಸಹ ಚುನಾವಣೆ ಪ್ರಚಾರದಲ್ಲಿ ಮಗ್ನವಾಗಿದೆ. ಬಿಜೆಪಿ ಪ್ರಚಾರ ಕಚೇರಿಯನ್ನೂ ಆರಂಭಿಸಲಾಗಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಭರ್ಜರಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ನಿವಾಸಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದ್ದರು. ಕೆಲ ಕಾಲ ಕಚೇರಿಯಲ್ಲಿ ಮಾತುಕತೆ ನಡೆಸಿದ ನಾಯಕರು ನಂತರ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದರು. ನಂತರ ಒಂದೇ ಕಾರಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಉಚ್ಚಗಾವಿ ಸೇರಿ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದೆ. ಬೆಲೆ ಏರಿಕೆಗೆ ಸರ್ಕಾರಗಳೇ ನೇರ ಹೊಣೆಯಾಗಿದೆ. ಕಳೆದ 7 ವರ್ಷಗಳಿಂದ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಅಭ್ಯರ್ಥಿಯ ಮೇಲೆ ಚುನಾವಣೆ ವಿಷಯ ಬದಲಾವಣೆ ಆಗಲಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಎಲ್ಲರೂ ಒಪ್ಪುವಂತಹ ಅಭ್ಯರ್ಥಿಯಾಗಿದ್ದಾರೆ. ಜಾರಕಿಹೊಳಿ ಇಡೀ ಕ್ಷೇತ್ರದಲ್ಲಿ ತಮ್ಮದೇ ಮತ ಬ್ಯಾಂಕ್ ಹೊಂದಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ವೈಯಕ್ತಿಕ ಸಂಪರ್ಕವೇ ಹೆಚ್ಚಿದೆ. ಇದು ಚುನಾವಣೆಯಲ್ಲಿ ಅನಕೂಲವಾಗಲಿದೆ. ಚುನಾವಣೆಯಲ್ಲಿ ಉಸ್ತುವಾರಿ ಅಗತ್ಯ ಇಲ್ಲ, ಎಲ್ಲವೂ ಸತೀಶ್ ಜಾರಕಿಹೊಳಿ ಅವರೇ ಆಗಿದ್ದಾರೆ ಎಂದರು.

Latest Indian news

Popular Stories