ವಿವಾದಕ್ಕೆ ಕಾರಣವಾದ ಹಂಪಿ ಕನ್ನಡ ವಿಶ್ವವಿದ್ಯಾಲಯ

ಬೆಂಗಳೂರು: ಕರ್ನಾಟಕ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಗಾಗಿ ವಿವಾದಕ್ಕೆ ಗುರಿಯಾಗುತ್ತಿದೆ. ಹಂಪಿ ಕನ್ನಡ ವಿವಿ ಕೊಡಮಾಡುವ ಪ್ರತಿಷ್ಠಿತ ನಾಡೋಜ' ಗೌರವ ಪದವಿಗೆ ಜಮಖಂಡಿಯ ಸಕ್ಕರೆ ಕಾರ್ಖಾನೆ ಮಾಲಕ ಜಗದೀಶ್ ಎಸ್.ಗುಡಗುಂಟಿ ಅವರನ್ನು ಆಯ್ಕೆ ಮಾಡಿರುವುದು ವಿವಾದಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ನಾಡೋಜ ಎಂದರೆನಾಡಿಗೆ ಗುರು’ ಎಂಬ ಅತ್ಯಂತ ಎತ್ತರದ ಘನತೆಯುಳ್ಳ ಉನ್ನತ ಸ್ಥಾನ. ಆದಿಕವಿ ಪಂಪ ಅವರಿಗೆ ಕೊಟ್ಟ ಬಿರುದು ನಾಡೋಜ'. ಆದರೆ ಇಂದು ನಾಡೋಜ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಗೌರವ ಸಂತೆಯಲ್ಲಿ ಮಾರಾಟ ಮಾಡುವ ವಸ್ತುಗಳಂತೆಬಿಕರಿ’ಯಾಗುತ್ತಿದೆ ಎಂಬ ಆಕ್ಷೇಪ ಸಾಹಿತ್ಯ, ಸಾಂಸ್ಕೃತಿಕ ವಲಯದಿಂದ ಕೇಳಿಬಂದಿದೆ.
ಮಾತ್ರವಲ್ಲ, ರಾಜ್ಯದ ವಿಶ್ವ ವಿದ್ಯಾಲಯ ಆವರಣಗಳಲ್ಲಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಾತಾವರಣ ಕಲುಷಿತಗೊಳ್ಳಲು ರಾಜಕೀಯ ಹಸ್ತಕ್ಷೇಪದ ಸಂಶಯವೂ ವ್ಯಕ್ತವಾಗಿದೆ. ಅನರ್ಹರಿಗೆ ನಾಡೋಜ ನೀಡಿ ಅದರ ಗೌರವಕ್ಕೆ ದಕ್ಕೆ ತರುವ ಬದಲು ಅದನ್ನು ನಿಲ್ಲಿಸುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ನಾಡೋಜ' ಎಂದರೆ ನಾಡಿಗೆ ಗುರು. ಆದಿಕವಿ ಪಂಪನಿಗೆ ಕೊಟ್ಟ ಬಿರುದು ಈ ನಾಡೋಜ. ಆದರೆ, ಇಂದು ನಾಡೋಜ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಗೌರವ ಪದವಿ ಪಕ್ಷ ರಾಜಕಾರಣದ ಹಿನ್ನೆಲೆಯ ವ್ಯಕ್ತಿಗಳಿಗೆ ನೀಡುವ ಮೂಲಕ ಆ ಉನ್ನತ ಪದವಿಯ ಗೌರವ ಹಾಳು ಮಾಡುವ ಬದಲು ಆ ಪ್ರಶಸ್ತಿಯನ್ನು ರದ್ದುಗೊಳಿಸುವುದು ಒಳ್ಳೆಯದು. ಆ ಮೂಲಕ ಆದಿಕವಿ ಪಂಪನಿಗೆ ನಾವು ಗೌರವಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ನಾಡೋಜ ಗೌರವ ಪದವಿಯನ್ನು ಸಾಹಿತ್ಯ, ಸಾಂಸ್ಕೃತಿಕ ವಲಯ ಹೊರತು ಬೇರೆ ಕ್ಷೇತ್ರಗಳಅನರ್ಹರಿಗೆ’ ನೀಡುವುದು ಅವನತಿಯ ಸಂಕೇತ. ಸಾಂಸ್ಕೃತಿಕ ಕ್ಷೇತ್ರ ಎತ್ತ ಸಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ವಿವಿಗಳ ಆವರಣದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಾತಾವರಣ ಕುಲಗೆಟ್ಟಿದೆ ಎಂಬುದರ ಸೂಚಕ ಇದು. ಪಕ್ಷ ಯಾವುದೇ ಇರಬಹುದು. ಆದರೆ, ಸಾಂಸ್ಕೃತಿಕ ಆವರಣ ಎಂದಿಗೂ ಕಲುಷಿತಗೊಳ್ಳಬಾರದು. ಗೌರವ ಪದವಿ ಕೊಡುವವರು-ಪಡೆಯುವವರು ಇಬ್ಬರೂ ಟೀಕೆಗೂ ಅರ್ಹರಲ್ಲ. ಇವರನ್ನು ನೀವು ನಿಜಕ್ಕೂ ಬದುಕಿದ್ದೀರಾ? ಎಂದು ಪ್ರಶ್ನಿಸಬೇಕಿದೆ. ಹಿರಿಮೆ-ಹೆಗ್ಗಳಿಕೆಯುಳ್ಳ `ನಾಡೋಜ’ ಗೌರವ ಪದವಿಗೆ ಪಾತ್ರರಾದ ಹಲವು ಹಿರಿಯರು ಆ ಪದವಿಯನ್ನು ಇಟ್ಟುಕೊಳ್ಳುವಂತಿಲ್ಲ. ಹಿಂದಿರುಗಿಸುವAತೆಯೂ ಇಲ್ಲ. ಅನರ್ಹರಿಗೆ ನೀಡುವುದು ಅವರಿಗೆ ಎಷ್ಟು ಕಿರಿಕಿರಿ, ಮುಜುಗರ ಆಗಬಹುದು ಎಂದು ಡಾ.ನಟರಾಜ್ ಬೂದಾಳು ಅಭಿಪ್ರಾಯಪಟ್ಟಿದ್ದಾರೆ.
ನಾಡೋಜ ಗೌರವ ಪದವಿ ನೀಡುವವರ ಮತ್ತು ತೆಗೆದುಕೊಳ್ಳುವವರ ಸಾಮಾಜಿಕ ಲಜ್ಜೆ ಮತ್ತು ಬದ್ಧತೆಗಳು ನಿರಶನವಾದಾಗ ಇಂತಹ ಸಿನಿಕ ಪ್ರಶ್ನೆಗಳು ಸಹಜ. ಆದರೆ, ಸಾರ್ವಜನಿಕ ಸಂಸ್ಥೆಗಳು ಮಾತ್ರ ಅಪಾತ್ರರ ಕೈಗೆ ಸಿಕ್ಕು ಸಂಕುಚಿತಗೊಳ್ಳುತ್ತಿರುವಾಗ ಪ್ರಶ್ನೆ ಮಾಡದೆ ಸುಮ್ಮನಿರುವುದೂ ಅಪಾಯಕಾರಿ ನಿಲುವು. ಗೌರವ ಪದವಿ, ಪ್ರಶಸ್ತಿಗಳು ಎಂದೂ ಸಂತೆಯಲ್ಲಿ ಸಿಗುವ ಸರಕಿನಂತೆ ಮಾರಾಟ ಮತ್ತು ಖರೀದಿಯ ವಸ್ತುಗಳಾಗಬಾರದು. ಕನ್ನಡ ದೇಶದಲ್ಲಿ ಅನೇಕ ಪ್ರತಿಭಾವಂತ ಅಜ್ಞಾತ ಜನಪದ ಕಲಾವಿದರಿದ್ದಾರೆ. ಕನ್ನಡ ನಾಡು ನುಡಿ, ಜನ ಸಾಮಾನ್ಯರ ನೋವುಗಳ ಭಾಗವಾಗಿ ಇಂದಿಗೂ ಹೋರಾಟಗಳ ಮುಂಚೂಣಿಯಲ್ಲಿರುವ ಸೂಕ್ಷ್ಮಸಂವೇದಿ ವ್ಯಕ್ತಿಗಳಿದ್ದಾರೆ. ಹಾಗೆ ನೋಡಿದರೆ, ನಾಡೋಜ ಪ್ರಶಸ್ತಿಗೆ ನಿಜಕ್ಕೂ ಅರ್ಹರಾದ ಎಚ್.ಎಸ್.ದೊರೆಸ್ವಾಮಿ, ಜಿ.ರಾಮಕೃಷ್ಣ, ಕೋಟಿಗಾನಹಳ್ಳಿ ರಾಮಯ್ಯ, ವೈದೇಹಿ, ಸಿದ್ಧಗಂಗಾ ಶ್ರೀಗಳಂತಹ ಮಹಾನುಭಾವರು ಇವರ ಇವರ ಕಣ್ಣಿಗೆ ಬೀಳುವುದೇ ಇಲ್ಲ! ಅದೇನೆ ಇದ್ದರೂ ಪದವಿ, ಪ್ರಶಸ್ತಿಗಳನ್ನು ಅನರ್ಹರಿಗೆ ನೀಡಿ ಅವುಗಳ ಘನತೆ, ಹಿರಿಮೆಗೆ ಕುಂದು ತರಬಾರದು ಎಂದು ಸಾಹಿತಿ, ಉಪನ್ಯಾಸಕ ಡಾ.ವಡ್ಡಗೆರೆ ನಾಗರಾಜಯ್ಯ ಸಲಹೆ ನೀಡಿದ್ದಾರೆ.

ನಾಡೋಜ' ಪದವಿಗೆ ತನ್ನದೆ ಆದ ಘನತೆ ಇದೆ. ಅನರ್ಹರಿಗೆ ನೀಡುವ ಮೂಲಕ ಆ ಉನ್ನತ ಪದವಿ ಗೌರವ ಕಳೆಯಬಾರದು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಳು, ಗೌರವ ಡಾಕ್ಟರೇಟ್ ಪದವಿಗಳು ಸೇರಿದಂತೆ ನಾಡೋಜ ಪದವಿಯೂ ರಾಜ್ಯಪಾಲರ ಕಚೇರಿಯಿಂದಲೇ ನಿರ್ಧಾರ ಆಗುತ್ತದೆ, ಅವರ ಕಳುಹಿಸಿದ ಪಟ್ಟಿಗೆ ಆಯ್ಕೆ ಸಮಿತಿ, ವಿಶ್ವ ವಿದ್ಯಾಲಯಗಳು ಒಪ್ಪಿಗೆ ನೀಡಬೇಕಾದ ದುಸ್ಥಿತಿ ಬಂದಿದೆ. ಹೀಗಾಗಿನಾಡೋಜ’ ಗೌರವ ಪದವಿ ಹೆಸರು ಬದಲಾವಣೆ ಮಾಡುವುದು ಒಳ್ಳೆಯದು ಎಂದು ಹೆಸರು ಹೇಳಲಿಚ್ಚಿಸದ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗರ ಆಡಳಿತ ಕಾಲಕ್ಕೆ ಇನ್ನೂ ಏನೆಲ್ಲಾ ನೋಡಬೇಕಿದೆಯೋ? ನಾಡೋಜ ಪ್ರಶಸ್ತಿ ನೀಡಲು ಇರುವ ಮಾನದಂಡಗಳಲ್ಲಿ `ಹಣವಂತರು’ ಎಂಬ ಮಾನದಂಡವನ್ನು ಯಾವಾಗ ಸೇರಿಸಲಾಯಿತು!? ನಿಜ ನಾಡೋಜರಾದ ರೈತರು, ಕಬ್ಬು ಬೆಳೆಗಾರರ ಬಾಕಿ ಹಣವನ್ನು ಸಂದಾಯ ಮಾಡಲಾಗದರನ್ನೆಲ್ಲ ನಾಡೋಜ ಪದವಿ ಕೊಟ್ಟು ಗೌರವಿಸುವ ಬೌದ್ಧಿಕ ದಾರಿದ್ರ‍್ಯಕ್ಕೆ ಸಾಕ್ಷಿಯಾಗಬೇಕಾಗಿ ಬಂದದ್ದು ಕನ್ನಡಗರ ದೌರ್ಭಾಗ್ಯವೇ ಸರಿ ಎಂದು ಲೇಖಕ
ದಾದಾ ಖಲಂದರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ನಾಡೋಜ ಪ್ರಶಸ್ತಿ ಎನ್ನುವುದು ಬಹಳ ದೊಡ್ಡ ಪ್ರಶಸ್ತಿ. ಮೌಲ್ಯಯುತವಾದ ಗೌರವ. ಅದನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ನಾಡಿಗೆ ಸೇವೆ ಸಲ್ಲಿಸಿದವರಿಗೆ ನೀಡಬೇಕಾಗಿರುವುದು ನ್ಯಾಯಸಮ್ಮತವಾದುದು. ಆದರೆ ಯಾವುದಾವುದೋ ರಾಜಕೀಯ ಕಾರಣಕ್ಕೆ, ಪ್ರಶಸ್ತಿಯ ಆಯ್ಕೆಯನ್ನು ಸಡಿಲಗೊಳಿಸಿ, ಅರ್ಹರಲ್ಲದವರಿಗೆ ಕೊಡುವುದು ಸರಿಯಾದ ಕ್ರಮವಲ್ಲ. ಅರ್ಹರು ನೂರಾರು ಜನರಿದ್ದಾರೆ. ನಾವು ಆಯ್ಕೆ ಮಾಡುವಾಗ ಅವರನ್ನು ಪರಿಗಣಿಸದೆ ತಮಗೆ ಬೇಕಾದವರಿಗೆ ಕೊಡುವುದು ಪ್ರಶಸ್ತಿಯ ಮೌಲ್ಯವನ್ನು ಕಡೆಗಣಿಸದಂತಾಗುತ್ತದೆ. ನಾವು ಗೌರವಿಸುವ ಹಂಪಿ ವಿವಿ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ, ಇದನ್ನು ವಿಷಾದದಿಂದಲೇ ಹೇಳಬೇಕಾಗುತ್ತದೆ. ಈ ಬೆಳವಣಿಗೆ ಸಾಂಸ್ಕೃತಿಕ ಅವನತಿಯಂತೆ ಕಾಣುತ್ತಿದೆ.
ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

Latest Indian news

Popular Stories