ಬೆಂಗಳೂರು : ಮಾರ್ಚ್‌ 9ಕ್ಕೆ ‘ರೈತ ಸೌರ ಶಕ್ತಿ ಮೇಳ’: ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾರ್ಚ್‌ 9 ರಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ‘ರೈತ ಸೌರಶಕ್ತಿ ಮೇಳ’ ಆಯೋಜಿಸಿದೆ.

ನಗರದ ಹೋಟೆಲ್‌ ಲಲಿತ್‌ ಅಶೋಕದಲ್ಲಿ ಬುಧವಾರ ನಡೆದ ಕರ್ಟನ್‌ರೈಸರ್ ಸಮಾರಂಭದಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್‌, “ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್‌ಸೆಟ್‌ ಬಳಕೆಯೇ ಪರಿಹಾರ. ಹಾಗಾಗಿ, ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಜಿಕೆವಿಕೆ ಆವರಣದಲ್ಲಿ ಇದೇ ಮಾರ್ಚ್‌ 9 ರಂದು “ರೈತ ಸೌರ ಶಕ್ತಿ ಮೇಳ” ಆಯೋಜಿಸಲಾಗಿದೆ,”ಎಂದರು.

ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು. ಅದಕ್ಕಾಗಿ ನಮ್ಮ ಸರ್ಕಾರ ‘ಕುಸುಮ್‌ ಬಿ’ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡುತ್ತಿದೆ. ನವೀನ ಮಾದರಿಯ ಸೌರ ಪಂಪ್‌ಸೆಟ್‌ಗಳ ಪ್ರಾತ್ಯಕ್ಷಿಕೆಯನ್ನು ನೋಡಿ, ಈ ವಿಚಾರವಾಗಿ ಇರುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಮೇಳ ಅತ್ಯುತ್ತಮ ವೇದಿಕೆಯಾಗಲಿದೆ. ಸೌರ ಪಂಪ್‌ಸೆಟ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ರೈತರು ತಮ್ಮ ಜಮೀನುಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತಾಗಬೇಕು,”ಎಂದರು.

“ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಾರ್ಚ್‌ 9ರ ಸಂಜೆ 4 ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜತೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ ‘ಕುಸುಮ್ ಸಿ’ ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿರುವ ವಿವಿಧ ವೋಲ್ಟೇಜ್ ವರ್ಗಗಳ ಹೊಸ ಸಬ್‌ಸ್ಟೇಷನ್‌ಗಳಿಗೂ ಮುಖ್ಯಮಂತ್ರಿಯವರು ಚಾಲನೆ ನೀಡಲಿದ್ದಾರೆ. ಮೇಳದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೇರಿದಂತೆ ಹಲವು ಸಚಿವರು ಮೇಳದಲ್ಲಿ ಭಾಗಿಯಾಗಲಿದ್ದಾರೆ,”ಎಂದು ಸಚಿವ ಜಾರ್ಜ್‌ ಮಾಹಿತಿ ನೀಡಿದರು.

Latest Indian news

Popular Stories